Rohini Acharya | ಪೋಷಕರೊಂದಿಗೆ ರೋಹಿಣಿ ಆಚಾರ್ಯ 
ದೇಶ

ಅವರಂತಹ ಪೋಷಕರನ್ನು ಪಡೆದ ನಾನೇ ಧನ್ಯಳು..ಕುಟುಂಬದಿಂದ ದೂರವಾಗಲು ಆ ವ್ಯಕ್ತಿಯೇ ಕಾರಣ ಎಂದ ರೋಹಿಣಿ ಆಚಾರ್ಯ | Rohini Acharya

ಪಟನಾ: ಕುಟುಂಬ ಮತ್ತು ರಾಜಕೀಯದಿಂದ ದೂರ ಉಳಿಯುವುದಾಗಿ ಶನಿವಾರ ಘೋಷಣೆ ಮಾಡಿದ್ದ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ, ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ಹೇಳಿಕೆಗೆ ಈಗಲೂ ಬದ್ಧ ಇರುವುದಾಗಿ ತಿಳಿಸಿದ್ದಾರೆ.
ಈಗಾಗಲೇ ನಾನು ಹೇಳುವುದನ್ನೆಲ್ಲಾ ಹೇಳಿದ್ದೇನೆ, ನಾನು ಯಾವುದರ ಬಗ್ಗೆಯೂ ಸುಳ್ಳು ಹೇಳಿಲ್ಲ, ಈಗ ನಿಜ ಹೇಳಬೇಕಿರುವುದು ತೇಜಸ್ವಿ ಯಾದವ್ ಮತ್ತು ಅವರ ಸಹಚರರಾದ ಸಂಜಯ್ ಯಾದವ್, ರಾಚೆಲ್ ಯಾದವ್ ಮತ್ತು ರಮೀಜ್, ನೀವು ಅವರಿಂದ ಉತ್ತರ ಪಡೆಯುವುದು ಉತ್ತಮ ಎಂದು ಮಾಧ್ಯಮಗಳಿಗೆ ತಿಳಿಸಿದರು.
ನನ್ನ ಪೋಷಕರು ಮತ್ತು ಸಹೋದರಿಯರು ನಿನ್ನೆ ನನಗಾಗಿ ಅಳುತ್ತಿದ್ದರು. ನನ್ನ ತಂದೆ ಯಾವಾಗಲೂ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಅವರಂತಹ ಪೋಷಕರನ್ನು ಪಡೆದಿರುವ ನಾನೇ ಧನ್ಯಳು, ಕುಟುಂಬದ ಸದಸ್ಯರಲ್ಲಿ ನನ್ನ ಸಹೋದರನಿಂದ ನಾನು ದೂರವಾಗಿದ್ದು, ನನ್ನ ತಂದೆ ತಾಯಿ ಮತ್ತು ಸಹೋದರಿಯರು ನನ್ನ ಜೊತೆಗಿದ್ದಾರೆ ಎಂದರು. ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಘಟನೆಯ ಬಳಿಕ ನನ್ನ ಅತ್ತೆ ತುಂಬಾ ಚಿಂತೆ ಮಾಡುತ್ತಿದ್ದು, ಮನೆಗೆ ಬರುವಂತೆ ಕರೆ ಮಾಡಿದ್ದಾರೆ, ಆದ್ದರಿಂದ ನಾನು ನನ್ನ ಅತ್ತೆ ಬಳಿಗೆ ಹೋಗುತ್ತಿದ್ದೇನೆ ಎಂದು ಹೇಳಿದರು.
ತೇಜಸ್ವಿ ಯಾದವ್​ರ ಕೆಲ ಆಪ್ತರು ತಮ್ಮನ್ನು ಪಕ್ಷ ಮತ್ತು ಕುಟುಂಬದಿಂದ ದೂರ ಇರುವಂತೆ ಬಲವಂತ ಮಾಡುತ್ತಿದ್ದಾರೆ ಎಂದು ನಿನ್ನೆ ಆರೋಪಿಸಿದ್ದ ರೋಹಿಣಿ ಆಚಾರ್ಯಗೆ, ಅವರ ಸಹೋದರ ತೇಜ್ ಪ್ರತಾಪ್ ಯಾದವ್ ಬೆಂಬಲ ನೀಡಿದ್ದು, ರೋಹಿಣಿಯನ್ನು ನಿಂದಿಸಿರುವುದು ಅಸಹನೀಯ ಎಂದು ಕರೆದಿದ್ದಾರೆ.
ರೋಹಿಣಿ ಆಚಾರ್ಯ ನಿನ್ನೆ ಹೇಳಿದ್ದೇನು..?
ಶನಿವಾರ (ನ 15) ತಮ್ಮ ಎಕ್ಸ್​​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ರೋಹಿಣಿ ಆಚಾರ್ಯ, ನಾನು ರಾಜಕೀಯವನ್ನು ತೊರೆಯುತ್ತಿದ್ದೇನೆ ಮತ್ತು ನನ್ನ ಕುಟುಂಬವನ್ನು ತ್ಯಜಿಸುತ್ತಿದ್ದೇನೆ. ಸಂಜಯ್ ಯಾದವ್ ಮತ್ತು ರಮೀಜ್ ನನ್ನನ್ನು ಕೇಳಿಕೊಂಡಿದ್ದು ಇದನ್ನೇ, ಈಗ ನಾನು ಎಲ್ಲಾ ಆಪಾದನೆಯನ್ನು ಹೊರುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ರೋಹಿಣಿ ಆಚಾರ್ಯ, 2024 ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಸರನ್ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ರಾಜೀವ್ ಪ್ರತಾಪ್ ರೂಡಿ ವಿರುದ್ಧ ಸೋಲನುಭವಿಸಿದರು. ಬಿಹಾರ ಚುನಾವಣೆಗೆ ಕೆಲ ದಿನಗಳ ಮೊದಲು ರೋಹಿಣಿ, ತಂದೆ ಲಾಲು ಯಾದವ್ ಮತ್ತು ಸಹೋದರ ತೇಜಸ್ವಿ ಯಾದವ್ ಅವರನ್ನು ತಮ್ಮ ಎಕ್ಸ್​ ಖಾತೆಯಿಂದ ಅನ್‌ಫಾಲೋ ಮಾಡಿದ್ದರು.
2022 ರಲ್ಲಿ ರೋಹಿಣಿ ಆಚಾರ್ಯ ತಮ್ಮ ತಂದೆಗೆ ಮೂತ್ರಪಿಂಡ ದಾನ ಮಾಡಿದ್ದಾರೆ ಎಂದು ಸಾಕಷ್ಟು ಸುದ್ದಿಯಾಗಿತ್ತು. ಅವರು ಆ ರೀತಿ ಮಾಡಿಲ್ಲ ಎನ್ನುವ ವದಂತಿಗಳು ಕೂಡ ಹಬ್ಬಿದ್ದವು. ಇದಕ್ಕೆ ಅವರ ಸಹೋದರ ತೇಜಸ್ವಿ ಆಪ್ತ ಸಂಜಯ್​ ಸಿಂಗ್​ ಕಾರಣ ಎನ್ನುವುದು ಲಾಲೂ ಪುತ್ರಿಯ ಆರೋಪ.
ಬಿಹಾರ ಅಧಿಕಾರ ಯಾತ್ರೆಯ ಸಂದರ್ಭದಲ್ಲಿ ಸಂಜಯ್ ಯಾದವ್ ಪಕ್ಷದಲ್ಲಿ ಅತಿಕ್ರಮಣ ನಡೆಸಿದ್ದಾರೆ ಎಂದು ಆರೋಪಿಸಿ, ರೋಹಿಣಿ ಆಚಾರ್ಯ ಪರೋಕ್ಷ ವಾಗ್ದಾಳಿ ನಡೆಸಿದ್ದರು, ಆರ್‌ಜೆಡಿ ಬಸ್‌ನ ಮುಂದಿನ ಸೀಟಿನಲ್ಲಿ ಸಂಜಯ್ ಯಾದವ್ ಕುಳಿತಿರುವ ಫೋಟೋಗೆ ರೋಹಿಣಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ವೈಯಕ್ತಿಕ ಹಗರಣವೊಂದರಲ್ಲಿ ಲಾಲೂ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್​​ರನ್ನು ಆರ್‌ಜೆಡಿಯಿಂದ ಉಚ್ಛಾಟಿಸಿದ ಬಳಿಕ ಕುಟುಂಬದಲ್ಲಿನ ಒಡಕಾಗಿದ್ದು, ಸದ್ಯ ರೋಹಿಣಿ ಆಚಾರ್ಯರ ಈ ನಿರ್ಧಾರ ಅದನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ. ತೇಜಸ್ವಿ ಆಪ್ತ, ರಾಜ್ಯಸಭಾ ಸಂಸದ ಸಂಜಯ್ ಯಾದವ್​​ರ ಈ ಅತಿರೇಕದ ವರ್ತನೆಯಿಂದ ಭುಗಿಲೆದ್ದ ಈ ಅಸಮಧಾನದ ಕಿಡಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಿಸಿದೆ.
ಸಂಜಯ್ ಯಾದವ್ ವಿರುದ್ಧ ರೋಹಿಣಿ ಆಚಾರ್ಯ ವಾಗ್ದಾಳಿ
ಲಾಲು ಯಾದವ್ ಕುಟುಂಬದಲ್ಲಿ ಸಂಜಯ್ ಕುರಿತಾದ ಅಸಮಾಧಾನ ಹೆಚ್ಚಾಗುತ್ತಿದ್ದು, ಇತ್ತೀಚಿನ ಆರ್‌ಜೆಡಿಯ ಟಿಕೆಟ್ ಹಂಚಿಕೆ ಮತ್ತು ಆಂತರಿಕ ನಿರ್ಧಾರಗಳಲ್ಲಿ ಸಂಜಯ್ ಹಸ್ತಕ್ಷೇಪ ಹೆಚ್ಚುತ್ತಿದೆ ಎಂದು ಅನೇಕರು ಆರೋಪಿಸುತ್ತಲೇ ಇದ್ದಾರೆ. ಈಗಾಗಲೇ ಪಕ್ಷದಿಂದ ಹೊರಹಾಕಲ್ಪಟ್ಟ ತೇಜ್, ಕುಟುಂಬ ಮತ್ತು ಆರ್‌ಜೆಡಿಯಿಂದ ದೂರವಾಗಲು ಸಂಜಯ್ ಕಾರಣ ಎಂದಿದ್ದಾರೆ(ಏಜೆನ್ಸೀಸ್​).