ಸಾವಿಗೆ ಶರಣಾದ ಬೂತ್ ಮಟ್ಟದ ಅಧಿಕಾರಿ; ಎಸ್​​​ಐಆರ್ ಒತ್ತಡವಿತ್ತು ಎಂದು ಕುಟುಂಬಸ್ಥರ ಆರೋಪ | Kerala BLO

Kerala BLO | ಸಂಗ್ರಹ ಚಿತ್ರ
Kerala BLO | ಸಂಗ್ರಹ ಚಿತ್ರ
Published on
ತಿರುವನಂತಪುರಂ: ಮುಂಬರುವ ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಭಾಗವಾಗಿ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಆಗಿ ಕೆಲಸ ಮಾಡುತ್ತಿದ್ದ ಶಾಲಾ ನೌಕರರೊಬ್ಬರು ಭಾನುವಾರ ( ನ 16) ಉತ್ತರ ಕೇರಳ ಜಿಲ್ಲೆಯ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ಸಂಬಂಧಿಸಿದ ಕಾರ್ಯದ ಒತ್ತಡದಿಂದಾಗಿ ಮೃತ ಅನೀಶ್ ಜಾರ್ಜ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸ್ಥಳೀಯ ಜನರು ಮತ್ತು ಅವರ ಕುಟುಂಬ ಸದಸ್ಯರು ಆರೋಪಿಸಿರುವುದಾಗಿ ವರದಿಯಾಗಿದೆ.
ಜಾರ್ಜ್ ಕೇರಳದ ಪಯ್ಯನ್ನೂರಿನ ಸರ್ಕಾರಿ ಶಾಲೆಯಲ್ಲಿ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದರು. ಪಯ್ಯನ್ನೂರಿನ ತಮ್ಮ ಮನೆಯ ಮೊದಲ ಮಹಡಿಯ ಹಾಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದು. ಬಿಎಲ್‌ಒ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಆ ವ್ಯಕ್ತಿ ಒತ್ತಡದಲ್ಲಿದ್ದರು ಎಂದು ಎಫ್‌ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಜಾರ್ಜ್ ಕುಟುಂಬದ ಆಪ್ತ ಶ್ಯಾಮ್, ಮೃತರು SIR ವಿಷಯದ ಕೆಲಸಗಳನ್ನು ಪೂರ್ಣಗೊಳಿಸುವ ಕೆಲಸದ ಒತ್ತಡದ ಬಗ್ಗೆ ತಮ್ಮ ಮುಂದೆ ಹೇಳಿಕೊಂಡಿರುವುದಾಗಿ ಬಹಿರಂಗಪಡಿಸಿದ್ದಾರೆ. ಭಾನುವಾರ ಬೆಳಗಿನ ಜಾವ 2 ಗಂಟೆಯವರೆಗೂ ಅನೀಶ್ ಜಾರ್ಜ್ ಕಾರ್ಯ ನಿರ್ವಹಿಸುತ್ತಿತ್ತು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದು. ಎಸ್‌ಐಆರ್‌ಗೆ ಸಂಬಂಧಪಟ್ಟ ಫಾರ್ಮ್‌ಗಳನ್ನು ಭರ್ತಿ ಮಾಡಿ, ಪೂರ್ವ ನಿಗದಿಯಾದಂತೆ ಆ ಪ್ರದೇಶದ ಎಲ್ಲರಿಗೂ ವಿತರಿಸಲು ಅವರ ಮೇಲೆ ತುಂಬಾ ಒತ್ತಡವಿತ್ತು ಎಂದು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತಂತೆ ಆಡಳಿತಾರೂಢ ಸಿಪಿಐ (ಎಂ) ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ವಿರೋಧ ವ್ಯಕ್ತಪಡಿಸಿರುವ ಸಮಯದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿರುವುದು ಮತ್ತೊಂದು ಸುತ್ತಿನ ವಿವಾದಕ್ಕೂ ಕಾರಣವಾಗಬಹುದು ಎನ್ನಲಾಗಿದೆ.
ವಿಪಕ್ಷಗಳ ಆರೋಪ
ಸಿಪಿಐ(ಎಂ) ನಾಯಕ ಎಂ.ವಿ. ಜಯರಾಜನ್ ಈ ಘಟನೆಯ ಕುರಿತಾಗಿ ಮಾತನಾಡಿದ್ದು, ಎಸ್‌ಐಆರ್‌ಗೆ ಸಂಬಂಧಿಸಿದಂತೆ ಬಿಎಲ್‌ಒಗಳ ಮೇಲಿರುವ ಕೆಲಸದ ಒತ್ತಡವನ್ನು ಇದು ಎತ್ತಿ ತೋರಿಸುತ್ತಿದೆ ಎಂದರೆ, ಇತ್ತ ಕಾಂಗ್ರೆಸ್ ನಾಯಕ ರಿಜಿಲ್ ಮಕ್ಕುಟ್ಟಿ, ಬಿಜೆಪಿ ಕಾರ್ಯಸೂಚಿಯನ್ನು ಅನುಷ್ಟಾನಗೊಳಿಸಲು ಚುನಾವಣಾ ಆಯೋಗ ಮಾಡಿದ ಪ್ರಯತ್ನದ ಬಲಿಪಶು ಅನೀಶ್ ಜಾರ್ಜ್ ಎಂದು ಆರೋಪಿಸಿದ್ದಾರೆ.
ಸ್ಪಷ್ಟನೆ ಕೇಳಿದ ಚುನಾವಣಾ ಅಧಿಕಾರಿ
ಈ ನಡುವೆ ಘಟನೆಗೆ ಸಂಬಂಧಪಟ್ಟಂತೆ ಕೇರಳದ ಮುಖ್ಯ ಚುನಾವಣಾ ಅಧಿಕಾರಿ ರತನ್ ಯು ಕೇಳ್ಕರ್, ಕಣ್ಣೂರು ಜಿಲ್ಲಾಧಿಕಾರಿಯಿಂದ ಸಾವಿನ ಕುರಿತಾಗಿ ವರದಿ ಕೇಳಿದ್ದು, ಮಾಧ್ಯಮದವರೊಂದಿಗೆ ಮಾತನಾಡಿರುವ ಕೇಳ್ಕರ್​, ಪೊಲೀಸ್ ತನಿಖೆಯೂ ನಡೆಯುತ್ತಿದೆ. ವರದಿಯನ್ನು ಸ್ವೀಕರಿಸಿದ ನಂತರ ಬೇರೆ ವಿಷಯಗಳನ್ನು ನಿರ್ಧರ ತೆಗೆದುಕೊಳ್ಳಲಾಗುವುದು. ಬಿಎಲ್‌ಒಗಳು ಸಾಮೂಹಿಕವಾಗಿ ಕೆಲಸ ಮಾಡುತ್ತಿದ್ದಾರೆ, ಅವರ ಮೇಲಿರುವ ಕೆಲಸದ ಒತ್ತಡದ ಬಗ್ಗೆ ನಮಗೆ ಇದುವರೆಗೆ ಯಾವುದೇ ಆರೋಪಗಳು ಬಂದಿಲ್ಲ ಎಂದು ತಿಳಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net