Rahul Gandhi: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದು, ಕೇವಲ ತೋರ್ಪಡಿಕೆಯ ಪ್ರಧಾನಿ ಎಂದು ಟೀಕಿಸಿದ್ದಾರೆ.
ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆದ ಕಾಂಗ್ರೆಸ್‌ನ ಭಾಗೀದಾರಿ ನ್ಯಾಯ್ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ರಾಜಕೀಯದಲ್ಲಿ ದೊಡ್ಡ ಸಮಸ್ಯೆ ಏನು ಎಂದು ನಿಮಗೆ ತಿಳಿದಿದೆಯೇ ಎಂದು ಅಲ್ಲಿ ನೆರೆದಿದ್ದವರನ್ನು ಪ್ರಶ್ನಿಸಿದರು,ಇದಕ್ಕೆ ಉತ್ತರಿಸಿದ ಕಾಂಗ್ರೆಸ್ ಕಾರ್ಯಕರ್ತ "ನರೇಂದ್ರ ಮೋದಿ" ಎಂದ. ಆಗ ರಾಹುಲ್ ಪ್ರಧಾನಿ ದೊಡ್ಡ ಸಮಸ್ಯೆ ಅಲ್ಲ ಎಂದು ಅರ್ಥಮಾಡಿಕೊಂಡಿರುವುದಾಗಿ ತಿಳಿಸಿದರು. ಪ್ರಧಾನಿ ಮೋದಿಗೆ ಜಾಸ್ತಿ ಅಧಿಕಾರವಿಲ್ಲ, ಆದರೂ ಮಾದ್ಯಮಗಳು ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ಮಿತಿ ಮೀರಿ ಹಿಗ್ಗಿಸಿವೆ ಎಂದರು.
ಭಾರತದ ಅಧಿಕಾರವಂಚಿತ ಸಮುದಾಯಗಳ ಕಡಿಮೆ ಪ್ರಾತಿನಿಧ್ಯದ ಬಗ್ಗೆ ಉಲ್ಲೇಖಿಸುತ್ತಾ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ದೇಶದ ಜನಸಂಖ್ಯೆಯಲ್ಲಿ ಶೇ 90ರಷ್ಟು ಜನ ದಲಿತರು, ಹಿಂದುಳಿದ ವರ್ಗಗಳು, ಬುಡಕಟ್ಟು ಜನಾಂಗದವರು ಮತ್ತು ಅಲ್ಪಸಂಖ್ಯಾತರಿದ್ದಾರೆ, ಆದರೆ ಬಜೆಟ್ ಸಿದ್ಧಪಡಿಸಿದ ನಂತರ ಹಲ್ವಾ ವಿತರಿಸುವಾಗ, ಈ 90% ಜನರನ್ನು ಪ್ರತಿನಿಧಿಸುವ ಯಾರೂ ಇರಲಿಲ್ಲ.ಆ ಜನರೇ ದೇಶದ ಉತ್ಪಾದಕ ಶಕ್ತಿಯಾಗಿದೆ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.
ಹಿಂದುಳಿದ ವರ್ಗದ ಯುವಕರಿಗೆ ತಮ್ಮ ಶಕ್ತಿಯ ಬಗ್ಗೆ ಅರಿವಿಲ್ಲ ,ಅವರು ಅದನ್ನು ಅರಿತುಕೊಂಡ ದಿನ ಪರಿಸ್ಥಿತಿಯೇ ಬದಲಾಗುತ್ತದೆ ಎಂದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್, 2004 ರಲ್ಲಿ ಯುಪಿಎ ಆಡಳಿತದ ಅವಧಿಯಲ್ಲಿ ನಾನು ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಜಾತಿ ಜನಗಣತಿಯನ್ನು ನಡೆಸಬೇಕಿತ್ತು, ನಿಮ್ಮ ಸಮಸ್ಯೆಗಳ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳದ ಕಾರಣ ಅದು ಸಾಧ್ಯವಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.(ಏಜೆನ್ಸೀಸ್)