ನವದೆಹಲಿ: ಅಮೆರಿಕದ ಸಂಸತ್ ಭವನದ ಮೇಲೆ ಡೊನಾಲ್ಡ್ ಟ್ರಂಪ್ ಅವರ ಅನುಯಾಯಿಗಳು ಮುತ್ತಿಗೆ ಹಾಕಿರುವ ಬೆನ್ನಲ್ಲೇ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಟ್ವಿಟ್ಟರ್ ಶಾಶ್ವತವಾಗಿ ತೆಗೆದುಹಾಕಿದೆ. ಟ್ರಂಪ್ ಎಕ್ಸಿಟ್ ಆಗುತ್ತಿದ್ದಂತೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರು, ಟ್ವಿಟ್ಟರ್ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸಕ್ರಿಯ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ.
ಟ್ರಂಪ್ ಅವರು ಟ್ವಿಟ್ಟರ್ನಲ್ಲಿ 88.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು. ನರೇಂದ್ರ ಮೋದಿಯವರು 64.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇದೀಗ ಟ್ರಂಪ್ ಖಾತೆಯನ್ನು ಟ್ವಿಟ್ಟರ್ನಿಂದ ತೆಗೆದುಹಾಕಿರುವ ಕಾರಣದಿಂದಾಗಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸಕ್ರಿಯ ರಾಜಕಾರಣಿಯಲ್ಲಿ ಮೋದಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಅದಾಗ್ಯೂ ಅಮೆರಿಕದ ಮಾಜಿ ಅಧ್ಯಕ್ಷ ಬರಕ್ ಒಬಾಮಾ ಅವರು 127.9 ಮಿಲಿಯನ್ ಫಾಲೋವರ್ಸ್ನೊಂದಿಗೆ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ರಾಜಕಾರಣಿಗಳ ಪಟ್ಟಿಯಲ್ಲಿ ಮೊದಲಲ್ಲಿದ್ದಾರೆ. ಈಗಿನ ಅಧ್ಯಕ್ಷ ಜೋ ಬೈಡೆನ್ ಅವರಿಗೆ 23.3 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಭಾರತದಲ್ಲಿ ಮೋದಿಯವರ ನಂತರ ಗೃಹ ಸಚಿವ ಅಮಿತ್ ಶಾ ಅವರು 24.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದರೆ, ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು 21.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. (ಏಜೆನ್ಸೀಸ್)