ನ್ಯೂಸ್

ಆಗಸ್ಟ್​ 1ರಿಂದ ಹಾಲಿನ ದರ ಏರಿಕೆ ಬರೆ: ನಂದಿನಿ ಹಾಲಿನ ದರ ಎಷ್ಟೆಷ್ಟು ಹೆಚ್ಚಾಗಲಿದೆ? ಇಲ್ಲಿದೆ ಮಾಹಿತಿ…

ಬೆಂಗಳೂರು: ಸಾಲು ಸಾಲು ದರ ಏರಿಕೆಯ ಬಿಸಿಯಲ್ಲಿ ಬೇಯುತ್ತಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಂಬಂತೆ ಮತ್ತೊಂದು ಹೊರೆ ಬಿದ್ದಿದೆ. ಹಾಲಿನ ದರ ಹೆಚ್ಚಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸ್ತು ಎಂದಿದ್ದು, ಆಗಸ್ಟ್​ 1ರಿಂದ ಹಾಲಿನ ದರ 3 ರೂಪಾಯಿ ಹೆಚ್ಚಾಗಲಿದೆ. ಹೊಸ ಸರ್ಕಾರ ಬಂದರೆ ಬೆಲೆ ಏರಿಕೆ ನಿಯಂತ್ರಣಕ್ಕೆ ಬರಬಹುದೇನೋ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.

5 ರೂಪಾಯಿ ಏರಿಕೆ ಮಾಡಲು ಹಾಲು ಒಕ್ಕೂಟಗಳು ಸಿಎಂ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದ್ದರು. ಆದರೆ, ಸಿಎಂ 3 ರೂ. ಏರಿಕೆಗೆ ಮಾತ್ರ ಅನುಮತಿ ನೀಡಿದ್ದಾರೆ. ಅಲ್ಲದೆ, ಏರಿಕೆಯಾಗುವ 3 ರೂಪಾಯಿ ಹಾಲು ಉತ್ಪಾದಕರಿಗೆ ಹೋಗಬೇಕು ಎಂದು ಖಡಕ್​ ಸೂಚನೆ ನೀಡಿದ್ದಾರೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಹಾಲಿನ ಬೆಲೆ ಏರಿಕೆಯ ಬಿಸಿ ತಟ್ಟಲಿದ್ದು, ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.

ಸದ್ಯದ ಹಾಲಿನ ದರ ಹಾಗೂ ಆಗಸ್ಟ್​ 1 ರಿಂದ ಜಾರಿಗೆ ಪರಿಷ್ಕೃತ ದರ ಪಟ್ಟಿ ಈ ಕೆಳಕಂಡಂತಿದೆ.

1. ನಂದಿನಿ( ಟೋನ್ಡ್ ಹಾಲು)

ಸದ್ಯದ ಹಾಲಿನ ದರ ಅರ್ಧ ಲೀಟರ್​ಗೆ 20 ಹಾಗೂ ಒಂದು ಲೀಟರ್​ಗೆ 39 ರೂಪಾಯಿ.

ಪರಿಷ್ಕೃತ ದರ 3 ರೂ. ಜಾಸ್ತಿ ಆದರೆ, ಅರ್ಧ ಲೀಟರ್‌ಗೆ 23 ಹಾಗೂ ಒಂದು ಲೀಟರ್‌ಗೆ 43 ರೂ. ಆಗಲಿದೆ.

2. ನಂದನಿ (ಡಬಲ್ ಟೋನ್ಡ್ ಹಾಲು)

* ಸದ್ಯದ ಹಾಲಿನ ದರ ಅರ್ಧ ಲೀಟರ್​ 19 ಹಾಗೂ ಒಂದು ಲೀಟರ್‌ಗೆ 38 ರೂಪಾಯಿ.

* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್​ಗೆ 22 ಹಾಗೂ ಒಂದು ಲೀಟರ್‌ಗೆ 41 ರೂಪಾಯಿ ಆಗಲಿದೆ.

3. ನಂದಿನಿ ಶುಭಂ

* ಸದ್ಯದ ದರ ಅರ್ಧ ಲೀಟರ್​ಗೆ 23 ಹಾಗೂ ಒಂದು ಲೀಟರ್ 45 ರೂಪಾಯಿ.

* ಪರಿಷ್ಕೃತ ದರ 3 ರೂ. ಜಾಸ್ತಿಯಾದ್ರೆ ಅರ್ಧ ಲೀಟರ್​ಗೆ 26 ಹಾಗೂ ಒಂದು ಲೀಟರ್‌ಗೆ 48 ರೂ. ಆಗಲಿದೆ.

4. ನಂದಿನಿ ಸ್ಪೆಷಲ್

* ಸದ್ಯದ ದರ ಅರ್ಧ ಲೀಟರ್​ಗೆ 23 ಹಾಗೂ ಒಂದು ಲೀಟರ್​ಗೆ 45 ರೂಪಾಯಿ.

* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್​ಗೆ 26 ಮತ್ತು ಒಂದು ಲೀಟರ್‌ಗೆ 48 ರೂ. ಆಗಲಿದೆ.

5. ನಂದಿನಿ ( ಸಮೃದ್ಧಿ)

* ಸದ್ಯದ ದರ ಅರ್ಧ ಲೀಟರ್​ಗೆ 24 ಹಾಗೂ ಒಂದು ಲೀಟರ್​ಗೆ 48 ರೂಪಾಯಿ.

* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್​ಗೆ 27 ಹಾಗೂ ಒಂದು ಲೀಟರ್‌ಗೆ 51 ರೂಪಾಯಿ ಆಗಲಿದೆ.

6. ನಂದಿನಿ ಹಸುವಿನ ಹಾಲು

* ಸದ್ಯದ ದರ ಅರ್ಧ ಲೀಟರ್​ಗೆ 22 ಹಾಗೂ ಲೀಟರ್‌ಗೆ 44 ರೂಪಾಯಿ.

* ಪರಿಷ್ಕೃತ ದರ 3 ರೂ. ಜಾಸ್ತಿ ಆದ್ರೆ ಅರ್ಧ ಲೀಟರ್​ಗೆ 25 ಹಾಗೂ ಒಂದು ಲೀಟರ್‌ಗೆ 54 ರೂಪಾಯಿ.