ಭಾರತದಲ್ಲಿ ಭಾದ್ರಪದ ಶುಕ್ಲ ಚತು ರ್ದಶೀ ಅನಂತನ ಚತುರ್ದಶಿಯೆಂದು ಪ್ರಸಿದ್ಧವಾಗಿದೆ. ಈ ದಿನ ಭಕ್ತಿಶ್ರದ್ಧೆಯಿಂದ ಶೇಷಶಾಯಿಯಾದ ಅನಂತ ಪದ್ಮನಾಭನ ವ್ರತವನ್ನು ಆಚರಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರೆ ಅನಂತ ಫಲಗಳನ್ನು ನೀಡುವನೆಂಬ ಅಚಲವಾದ ನಂಬಿಕೆ ಭಾರತದ ಸನಾತನ ಆರ್ಷೆಯ ಪರಂಪರೆಯಲ್ಲಿ ಬೆಳೆದು ಬಂದಿದೆ. ಸರ್ವಾಂತರ್ಯಾಮಿಯಾಗಿ ಅಣುರೇಣುತೃಣಕಾಷ್ಠ ಗಳಲ್ಲಿಯೂ ತನ್ನ ಮಹಿಮೆಯನ್ನು ತೋರುವ ಅನಂತ ಸ್ವರೂಪನಾದ ಭಗವಂತನನ್ನೇ ಅನಂತಪದ್ಮನಾಭಸ್ವಾಮಿಯನ್ನಾಗಿ ಕಂಡು ವ್ರತವನ್ನು ಆಚರಿಸುವುದೇ ಅನಂತ ಚತುರ್ದಶಿಯ ವ್ರತದ ವಿಶೇಷ. ಅನಂತ ನೆಂದರೆ ಅಂತವಿಲ್ಲದವನೆಂದರ್ಥ.
ಅಂತವಿಲ್ಲ ದವ ಪರಮಾತ್ಮ ಒಬ್ಬನೇ. ಎರಡು ವ್ಯಕ್ತಿಗಳಿಗಿರಲು ಸಾಧ್ಯವಿಲ್ಲ. ಇದ್ದರೆ ಅವರಿಗೆ ಅನಂತತ್ವವೇ ಉಂಟಾಗಲು ಸಾಧ್ಯವಿಲ್ಲ. ಭಗವಂತ ಹುಟ್ಟು-ಸಾವುಗಳು ಇಲ್ಲದವ. ಹಾಗಾಗಿಯೇ ಆತ ಅಜ, ನಿತ್ಯ, ಶಾಶ್ವತ, ಪುರಾಣ ಪುರುಷ. ಈ ರೀತಿಯಲ್ಲಿ ಕಾಮನೆಯಿಲ್ಲದ ಭಾವನೆಯಿಂದ ಅನಂತನ ವ್ರತವನ್ನು ಆಚರಿಸಿದರೆ ನಮಗೂ ಅಜರಾಮರತೆಯನ್ನು ಅನುಗ್ರಹಿಸಿಬಲ್ಲ. ಸಂಸಾರ ಚಕ್ರದಿಂದ ದಾಟಿಸಬಲ್ಲ. ಇಲ್ಲಿ ಅನಂತನೆಂದರೆ ಪ್ರಧಾನವಾದ ನಾಗದೇವತೆಗಳಲ್ಲಿ ಒಬ್ಬ. ನಾಗ ಕುಲದಲ್ಲಿ ಮೊದಲನೆ ಯವ. ಇವನನ್ನು ಭಗವಂತ ತನ್ನ ಹಾಸಿಗೆಯಾಗಿ ಮಾಡಿಕೊಂಡಿರುವನು. ಅನಂತ, ವಾಸುಕಿ, ಶಂಖ,ಪದ್ಮ, ಕಂಬಲ, ಕಾಕೋಟಕ, ಧೃತರಾಷ್ಟ್ರ, ಶೇಷ, ಕಾಳಿಯ, ತಕ್ಷಕ, ಪಿಂಗಳ ಮತ್ತು ಮಣಿಭದ್ರಕ ಎಂಬ ಹೆಸರಿನ ಹನ್ನೆರಡು ನಾಗಕುಲದವರಿದ್ದಾರೆ. ಮಹಾವಿಷ್ಣು ಸ್ವರೂಪನಾದ ಪದ್ಮನಾಭ ಸ್ವಾಮಿಯು ಅನಂತಶಯನನಷ್ಟೇ ಅಲ್ಲ, ನಾಗಕುಲದ ಅನಂತನೂ ತಾನೇ ಆಗಿರುವೆ ಎಂದು ಶ್ರೀಕೃಷ್ಣನು ಗೀತೆಯಲ್ಲಿ ‘ಅನಂತಶ್ಚಾಸ್ಮಿ ನಾಗಾನಾಂ’ ಎಂದು ಹೇಳಿದ್ದಾನೆ.
ವ್ರತಾಚರಣೆಗೆ ದೇಶ - ಕಾಲ: ಅನಂತನವ್ರತವನ್ನು ಸ್ನಾನಾದಿಗಳನ್ನು ಪೂರೈಸಿ ಶುದ್ಧ ವಸ್ತ್ರಾದಿಗಳನ್ನು ಧರಿಸಿ ನದೀತೀರ, ಸಾಗರ ತೀರ, ತೀರ್ಥಕ್ಷೇತ್ರ ಅಥವಾ ದೇವಾಲಯ ಮುಂತಾದ ಶುದ್ಧ ಪರಿಸರವಿರುವಲ್ಲಿ ಅಲ್ಲಾಗದಿದ್ದರೆ ತಮ್ಮ ತಮ್ಮ ಮನೆಗಳಲ್ಲಿ ದಂಪತಿಗಳು ಆಚರಿಸಬೇಕು. ಭಾದ್ರಪದ ಶುಕ್ಲ ಚತುರ್ದಶಿಯಲ್ಲಿ ಅನಂತ ವ್ರತ ಹೇಳಲ್ಪ ಟ್ಟಿದೆ. ಉದಯದಿಂದ ಮೂರು ಮುಹೂರ್ತಗಳ ಕಾಲ ಇರುವ ಚತುರ್ದಶಿಯು ಗ್ರಾಹ್ಯವು. ಒಂದು ಮುಹೂರ್ತವೆಂದರೆ ಎರಡು ಘಟೀ ಅಥವಾ ನಲವತ್ತೆಂಟು ನಿಮಿಷ. ಇದು ಮುಖ್ಯ ಪಕ್ಷವು. ಇದರ ಅಭಾವದಲ್ಲಿ ಎರಡೂ ಮುಹೂರ್ತ ಇರುವ ಚತುರ್ದಶಿ ಯಾದರೂ ಗ್ರಾಹ್ಯ. ಎರಡು ಮುಹೂರ್ತ ಕ್ಕಿಂತ ಕಡಿಮೆಯಿದ್ದರೆ ಹಿಂದಿನ ದಿನವೇ ಗ್ರಾಹ್ಯವು. ಎರಡೂ ದಿನ ಸೂರ್ಯೋದಯ ವ್ಯಾಪ್ತಿಯಿದ್ದರೆ ಹಿಂದಿನ ದಿನವೇ ಆಚರಿಸಬೇಕು. ಯಾಕೆಂದರೆ ಅದು ಸಂಪೂರ್ಣ ತಿಥಿಯಾಗುವುದು. ಇದಕ್ಕೆ ಪೂರ್ವಾಹ್ನವು (ಬೆಳಗಿನ ಸಮಯ) ಮುಖ್ಯ ಕರ್ಮ ಕಾಲವು. ಅದಾಗದಿದ್ದಲ್ಲಿ ಮಧ್ಯಾಹ್ನವಾದರೂ ಅಡ್ಡಿಯಿಲ್ಲ.
ಆಚರಣೆ ಹೇಗೆ?: ಈ ವ್ರತದಲ್ಲಿ ಸುವರ್ಣ ಪ್ರತಿಮೆಯಲ್ಲಿ ಅನಂತಪದ್ಮನಾಭನನ್ನು ಭಾವಿಸಿ - ಆವಾಹಿಸಿ ಪೂಜಿಸಬೇಕು. ಹದಿನಾಲ್ಕು ಗಂಟುಗಳುಳ್ಳ ಅನಂತ ದಾರದಲ್ಲಿಯೂ ಅನಂತ ಪೂಜೆಯನ್ನು ಮಾಡಬೇಕು. ಹೂವು ಗಂಧ ಅಕ್ಷತೆಗಳಿಂದ ಅರ್ಚಿಸಬೇಕು. ಧೂಪ- ದೀಪ - ನೈವೇದ್ಯವನ್ನು ಮಾಡಿ ಮಂಗಳಾರತಿ ಮಾಡಬೇಕು. ಅನಂತರ ಅನಂತನವ್ರತ ಕಥೆಯನ್ನು ಕೇಳಬೇಕು. ಅನಂತನ ದಾರವನ್ನು ತಮ್ಮ ಶ್ರೇಯೋಭಿವೃದ್ಧಿಗಾಗಿ ದಂಪತಿಗಳು ಧರಿಸಬೇಕು.
ವ್ರತಕಥೆ: ಹಿಂದೆ ಕೌಂಡಿಲ್ಯನೆಂಬ ಒಬ್ಬ ಮುನಿಯಿದ್ದ. ವಯಸ್ಕನಾದ ಮೇಲೆ ಅನುರೂಪಳಾದ ವಧುವಿನೊಡನೆ ಆತನ ವಿವಾವಾಹವಾಗುತ್ತದೆ. ಒಂದು ದಿವಸ ದಂಪತಿಗಳಿಬ್ಬರು ದಾರಿಯಲ್ಲಿ ಸಾಗುತ್ತಿರುವಾಗ ನದೀತೀರದಲ್ಲಿ ನಿತ್ಯಕರ್ಮಕ್ಕಾಗಿ ತಂಗುತ್ತಾರೆ. ಅಲ್ಲಿ ಕೆಲವು ಸ್ತ್ರೀಯರು ಭಕ್ತಿಯಿಂದ ಅನಂತನವ್ರತವನ್ನು ಆಚರಿಸುತ್ತಿರುತ್ತಾರೆ. ಇದನ್ನು ನೋಡಿದ ಕೌಂಡಿಲ್ಯನ ಪತ್ನಿಗೆ ತಾನೂ ಈ ವ್ರತವನ್ನು ಆಚರಿಸಬೇಕೆಂಬ ಆಸೆ ಆಗುವುದು. ಅಲ್ಲಿರುವವರಿಂದ ವ್ರತದ ವಿವರಣೆಯನ್ನು ಪಡೆದು ಅನಂತನವ್ರತವನ್ನು ಆಚರಿಸುತ್ತಾಳೆ. ಹಾಗೆಯೇ ಭಕ್ತಿಯಿಂದ ಅನಂತನ ದಾರವನ್ನು ಧರಿಸುತ್ತಾಳೆ. ಇದರಿಂದ ಅವಳ ಕುಟುಂಬಕ್ಕೆ ದಿನೇ ದಿನೇ ಸಂಪತ್ತು ವೃದ್ಧಿಯಾಗುವುದು.
ಒಂದು ದಿನ ಪತಿಯಾದ ಕೌಂಡಿಲ್ಯನು ತನ್ನ ಪತ್ನಿಯ ಧರಿಸಿರುವ ದಾರವನ್ನು ನೋಡಿ ಇದು ಏನೆಂದು ಕೇಳುತ್ತಾನೆ. ಆಗ ಅವಳು ಅನಂತನ ವ್ರತದ ಮಹಿಮೆಯನ್ನು ಹಾಗೂ ಧರಿಸಿರುವ ದಾರದ ವಿವರವನ್ನೂ ತಿಳಿಸುತ್ತಾಳೆ. ಹಾಗೆಯೇ ನಮಗೆ ಇಷ್ಟೂ ಸಂಪತ್ತು ಒದಗಿ ಬರಲು ಕಾರಣ ಅನಂತಪದ್ಮನಾಭನ ವ್ರತವೆಂದು ಹೇಳುತ್ತಾಳೆ. ಆದರೆ ಕೌಂಡಿಲ್ಯನಿಗೆ ಅಹಂಕಾರವಿತ್ತು. ಆತ ತನ್ನೆಲ್ಲಾ ಸಂಪತ್ತಿಗೆ ಕಾರಣ ತನ್ನ ಪಾಂಡಿತ್ಯ ಎಂದುಕೊಂಡಿದ್ದ. ಆದ್ದರಿಂದ ಪತ್ನಿಯ ಮಾತನ್ನು ಆತ ತಿರಸ್ಕರಿಸುತ್ತಾನೆ. ಇದರಿಂದ ಕುಪಿತನಾದ ಅನಂತಪದ್ಮನಾಭಸ್ವಾಮಿಯು ಅವನ ಸಂಪತ್ತನ್ನೆಲ್ಲಾ ಕ್ಷೀಣಗೊಳಿಸುತ್ತಾನೆ. ಕೊನೆಯಲ್ಲಿ ಕೌಂಡಿಲ್ಯ ಮುನಿಯು ತನ್ನ ತಪ್ಪಿನ ಅರಿವಾಗಿ ಸ್ವಾಮಿಯನ್ನು ಕುರಿತು ತಪಸ್ಸನ್ನು ಆಚರಿಸಿ ಅನಂತಪದ್ಮನಾಭನನ್ನು ಒಲಿಸಿಕೊಂಡು ಪುನಃ ಅನಂತವಾದ ಸಂಪತ್ತನ್ನು ಪಡೆಯುತ್ತಾನೆ.