ನ್ಯೂಸ್

ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಬಳಿಕ ಕ್ಷಮೆ ಕೇಳಿದ ಜೆ.ಪಿ.ನಡ್ಡಾ| J P Nadda

J P Nadda: ರಾಜ್ಯಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಮತ್ತು ಕೇಂದ್ರ ಸಚಿವ ಜೆ.ಪಿ.ನಡ್ಡಾ ನೀಡಿದ ಹೇಳಿಕೆ ತೀವ್ರ ವಿರೋಧಕ್ಕೆ ಕಾರಣವಾಯತು. ತಕ್ಷಣ ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆಯಾಚನೆ ಮಾಡಿದರು.

ಆಪರೇಷನ್ ಸಿಂಧೂರ್ ಮತ್ತು ಪಹಲ್ಗಾಮ್ ಉಗ್ರರ ದಾಳಿಯ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಖರ್ಗೆ ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದರು. ಈ ವೇಳೆ ಪ್ರಧಾನಿ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ್ದರು. ಇದರಿಂದ ಸಿಟ್ಟಿಗೆದ್ದು ಎದ್ದು ನಿಂತ ಜೆ.ಪಿ.ನಡ್ಡಾ ಪ್ರಧಾನಿ ವಿರುದ್ಧದ ಟೀಕೆಗೆ ಖರ್ಗೆಯವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಖರ್ಗೆಯವರ ಹೇಳಿಕೆಗಳನ್ನ ಕಡತದಿಂದ ತೆಗೆಯಬೇಕು ಎಂದು ಒತ್ತಾಯಿಸಿದರು.

ನಡ್ಡಾರ ಮಾನಸಿಕ ಸ್ಥಿಮಿತದ ಹೇಳಿಕೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಪಕ್ಷ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕ್ಷಮೆಯಾಚನೆಗೆ ಒತ್ತಾಯ ಮಾಡಿದರು.

ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, "ಎನ್‌ಡಿಎ ಸರ್ಕಾರದಲ್ಲಿ ತಾವು ಗೌರವಿಸುವ ಇಬ್ಬರು ಅಥವಾ ಮೂವರು ಸಚಿವರಲ್ಲಿ ಜೆ.ಪಿ.ನಡ್ಡಾ ಸಹ ಒಬ್ಬರು. ಆದರೆ ಅವರು ನನ್ನನ್ನು ಮಾನಸಿಕ ವ್ಯಕ್ತಿ ಎಂದು ಕರೆಯುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಷಯ. ಅವರು ಕ್ಷಮೆಯಾಚನೆ ಮಾಡಬೇಕು, ನಾನು ಅವರನ್ನು ಬಿಡಲ್ಲ" ಎಂದು ಕಿಡಿಕಾರಿದರು.

ತಕ್ಷಣ ಎದ್ದು ತಾವು ನೀಡಿದ  ಹೇಳಿಕೆಗೆ ಕ್ಷಮೆಯಾಚನೆ ಮಾಡಿ, ಹೇಳಿಕೆ ವಾಪಸ್ ಪಡೆಯುತ್ತೇನೆ ಎಂದು ನಡ್ಡಾ ಹೇಳಿದರು. ಆದರೆ ಖರ್ಗೆಯವರಿಗೆ ಸಂಸದೀಯ ಕ್ಷೇತ್ರದಲ್ಲಿ ದೀರ್ಘವಾದ ಅನುಭವ ಇದೆ. ಭಾಷಣದಲ್ಲಿ ಬಳಸಿದ ಪದಗಳು ಘನತೆಯನ್ನು ಪ್ರತಿಬಿಂಬಿಸಲಿಲ್ಲ. ಪ್ರಧಾನಿಯವರ ಸ್ಥಾನಮಾನದ ಬಗ್ಗೆ ಕಾಳಜಿ ವಹಿಸಲಿಲ್ಲ. ಆಕ್ಷೇಪರ್ಹ ಹೇಳಿಕೆಗಳನ್ನು ನೀಡಿದ್ದಾರೆ, ಅವುಗಳನ್ನು ಕಡತದಿಂದ ತೆಗೆಯುವಂತೆ ಒತ್ತಾಯಿಸಿದರು.

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತು ಮಾತನಾಡಿದ ಖರ್ಗೆ, "ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಅನೇಕ ದಾಳಿಗಳು ನಡೆದಿವೆ. ಆದರೆ ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. 2016ರಲ್ಲಿ ಉರಿ ಮತ್ತು ಪಠಾಣ್‌ಕೋಟ್ ದಾಳಿ, 2019ರಲ್ಲಿ ಪುಲ್ವಾಮಾ ದಾಳಿ, ಈಗ 2025ರಲ್ಲಿ ಪಹಲ್ಗಾಮ್ ದಾಳಿ" ನಡೆದಿದೆ ಎಂದು ಹೇಳಿದರು.

"ಈ ಎಲ್ಲಾ ಘಟನೆಗಳು ಪುನರಾವರ್ತಿತ ಗುಪ್ತಚರ ವೈಫಲ್ಯ ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ವೈಫಲ್ಯವನ್ನು ಸ್ಪಷ್ಟವಾಗಿ ಹೇಳುತ್ತವೆ. ಇದಕ್ಕೆ ಯಾರು ಹೊಣೆ ಎಂದು ನಾನು ಗೃಹ ಸಚಿವರನ್ನು ಕೇಳಲು ಬಯಸುತ್ತೇನೆ? ತಪ್ಪುಗಳನ್ನು ಸರಿಪಡಿಸಲು ಸರ್ಕಾರ ಏನು ಮಾಡಿದೆ? ನೀವು ಜವಾಬ್ದಾರರಾಗಿದ್ದರೆ, ನಿಮ್ಮ ಹುದ್ದೆಯನ್ನು ಖಾಲಿ ಮಾಡಿ. ಇಲ್ಲದಿದ್ದರೆ, ಪ್ರಧಾನಿ ಯಾವ ಕ್ರಮ ತೆಗೆದುಕೊಳ್ಳುತ್ತಿದ್ದಾರೆ...?, ಹಿಂದಿನವರನ್ನು ದೂಷಿಸುವ ಪರಂಪರೆಯಿಂದ ನೀವು ಎಷ್ಟು ದಿನ ಬದುಕಲು ಸಾಧ್ಯ?" ಎಂದು ಹೇಳಿದರು. (ಏಜೆನ್ಸೀಸ್)