ನ್ಯೂಸ್

ಕೆಂಪೇಗೌಡರ ಪ್ರತಿಮೆ ಅನಾವರಣ ವೇಳೆ ಆರ್​.ಅಶೋಕ್​ ಎಡವಟ್ಟು? ಬಿಜೆಪಿ ನಾಯಕರಿಗೆ ಕಾಂಗ್ರೆಸ್​ ಹಿಗ್ಗಾಮುಗ್ಗಾ ತರಾಟೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗಿರುವ ನಾಡಪ್ರಭು ಕೆಂಪೇಗೌಡರ ಬೃಹತ್​ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು(ಶುಕ್ರವಾರ) ಅನಾವರಣ ಮಾಡಿದರು. ಈ ವೇಳೆ ತೆಗೆದ ಫೋಟೋವೊಂದನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿರುವ ಕಾಂಗ್ರೆಸ್​, ರಾಜ್ಯ ಬಿಜೆಪಿ ನಾಯಕರನ್ನು ಟೀಕಿಸಿದೆ.

'ಸ್ವಾಮೀಜಿಗಳಿಗೆ ಅವರದ್ದೇ ಆದ ಗೌರವವಿರುತ್ತದೆ. ಘನತೆ ಇರುತ್ತದೆ. ಅವರ ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು ಆರ್​. ಅಶೋಕ್​ ಅವರಿಗೆ ಸದರ ಎನಿಸಿದ್ದಾರೆಯೇ? ಇದೇ ರೀತಿ ಮೋದಿ ಹೆಗಲಿಗೆ ಕೈ ಹಾಕುವ ಧೈರ್ಯವಿದೆಯೇ? ಧರ್ಮ, ಸಂಸ್ಕೃತಿಯ ಬಗ್ಗೆ ಮಾತಾಡುವ ಕರ್ನಾಟಕ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ' ಎಂದು ಕಾಂಗ್ರೆಸ್​ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ಕೆಂಪೇಗೌಡರ ಪ್ರತಿಮೆ ಬಳಿ ಪ್ರಧಾನಿ ನರೇಂದ್ರ ಮೋದಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ರಾಜ್ಯಪಾಲ ಥಾವರ್​ ಚಂದ್​ ಗೆಲ್ಹೋಟ್​, ಸಿಎಂ ಬಸವರಾಜ ಬೊಮ್ಮಾಯಿ, ಬಿ.ಎಸ್.​ ಯಡಿಯೂರಪ್ಪ ಸೇರಿದಂತೆ ಹಲವರು ಗ್ರೂಪ್​ ಫೋಟೋ ತೆಗೆಸಿಕೊಂಡಿದ್ದಾರೆ. ಈ ವೇಳೆ ನಿರ್ಮಲಾನಂದನಾಥ ಶ್ರೀಗಳ ಹೆಗಲ ಮೇಲೆ ಸಚಿವ ಆರ್​.ಅಶೋಕ್​ ಕೈ ಹಾಕಿದ್ದಾರೆ. ಅಶೋಕ್​ರ ಈ ವರ್ತನೆಯನ್ನ ಕಾಂಗ್ರೆಸ್​ ಟೀಕಿಸಿದೆ.