ನ್ಯೂಸ್

ಅರಸಿಕೆರೆಯಿಂದ ಬಿಎಸ್​ವೈ ಸಂಬಂಧಿ ಸಂತೋಷ್​, ವರುಣಾದಿಂದ ಭಾರತಿ ಶಂಕರ್​ಗೆ ಜೆಡಿಎಸ್ ಟಿಕೆಟ್ ಘೋಷಣೆ

ಮೈಸೂರು/ಹಾಸನ: ಅರಸಿಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಆಪ್ತ ಹಾಗೂ ಸಂಬಂಧಿ ಎನ್​.ಆರ್​. ಸಂತೋಷ್​ ಕಣಕ್ಕಿಳಿಯುವುದು ಖಚಿತವಾಗಿದೆ. ಇನ್ನೊಂದೆಡೆ ವರುಣಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಬದಲಾಗಿದ್ದು, ಭಾರತಿ ಶಂಕರ್​ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಲಿದ್ದಾರೆ.

ಅರಸಿಕೆರೆ ಟಿಕೆಟ್ ಎನ್.ಆರ್.ಸಂತೋಷ್​ಗೆ ಫೈನಲ್ ಆಗಿದೆ. ದೇವೇಗೌಡರ ಜತೆ ನಡೆದ ಚರ್ಚೆಯಲ್ಲಿ ಟಿಕೆಟ್​ ಅಂತಿಮವಾಗಿದೆ. ಬಾಣಾವರ ಅಶೋಕ್ ಅವರ ಮನವೊಲಿಸಿ ಸಂತೋಷ್​ಗೆ ಟಿಕೆಟ್​ ಫೈನಲ್​ ಮಾಡಲಾಗಿದ್ದು, ಅರಸಿಕೆರೆ ಜೆಡಿಎಸ್​ ಅಭ್ಯರ್ಥಿಯಾಗಿ ಸಂತೋಷ್​ ಸ್ಫರ್ಧೆ ಖಚಿತವಾಗಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಜತೆ ಚರ್ಚಿಸಿ ಎಚ್​ಡಿಡಿ ಅಂತಿಮ ನಿರ್ಣಯ ತೆಗೆದುಕೊಂಡಿದ್ದಾರೆ.

ವರುಣಾದಲ್ಲಿ ಜೆಡಿಎಸ್​ ಅಭ್ಯರ್ಥಿಯಾಗಿದ್ದ ಅಭಿಷೇಕ್​ ದಿಢೀರ್​ ನಾಪತ್ತೆಯಾಗಿ ಯಾರ ಕೈಗೂ ಸಿಗದ ಹಿನ್ನೆಲೆಯಲ್ಲಿ ಅಭಿಷೇಕ್​ ಬದಲು ಭಾರತಿ ಶಂಕರ್​ ಅವರಿಗೆ ಜೆಡಿಎಸ್​ ಟಿಕೆಟ್​ ನೀಡಲಾಗಿದೆ. ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್​ ಅಭ್ಯರ್ಥಿಯಾಗಿ ಭಾರತಿ ಶಂಕರ್​ ಅವರು ಸ್ಪರ್ಧಿಸಲಿದ್ದಾರೆ. ಬಿಜೆಪಿ ಟಿಕೆಟ್​ ಮಿಸ್​ ಆಗಿದ್ದಕ್ಕೆ ಭಾರತಿ ಶಂಕರ್​ ಅವರು ಜೆಡಿಎಸ್​ ಸೇರಿ, ಟಿಕೆಟ್​ ಪಡೆದು ಕಣಕ್ಕಿಳಿದಿದ್ದಾರೆ.

ಚಿತ್ರದುರ್ಗದಿಂದ ರಘು ಆಚಾರ್ ಜೆಡಿಎಸ್​ ಅಭ್ಯರ್ಥಿ ಆಗಿದ್ದಾರೆ. ಕಾಂಗ್ರೆಸ್​ನಿಂದ ಟಿಕೆಟ್​ ಸಿಗದಿದ್ದಕ್ಕೆ ರಘು ಆಚಾರ್​ ಅವರು ಚಿತ್ರದುರ್ಗದಿಂದ ಕಣಕ್ಕಿಳಿಯುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)