ನ್ಯೂಸ್

ನನ್ನಿಂದ ಸಹಿಸೋಕೆ ಆಗ್ತಿಲ್ಲ… ಎನ್ನುತ್ತಲೇ ಪೊಲೀಸರ ಹೆಸರು ಪ್ರಸ್ತಾಪಿಸಿ ಸಾವಿನ ಹಾದಿ ಹಿಡಿದ ಮೈಸೂರಿನ ಫೋಟೋಗ್ರಾಫರ್!

ಮೈಸೂರು: 'ಅಪ್ಪ-ಅಮ್ಮ ಪ್ಲೀಸ್​... ನನ್ನನ್ನು ದಯವಿಟ್ಟು ಕ್ಷಮಿಸಿ. ಏನೇ ಕಷ್ಟ ಬಂದರೂ ಇದುವರೆಗೆ ನಾನು ಹೇಡಿತನ ಮಾಡಿರಲಿಲ್ಲ. ಅದಕ್ಕೆ ಸಿಕ್ಕ ಪ್ರತಿಫಲ ಈ ಅವಮಾನ. ಕೊಲೆಯಾದ ಜಾಗದಲ್ಲಿ ಇದ್ದ ಮಾತ್ರಕ್ಕೆ ಅವರೇ ಕೊಲೆಗಾರ ಆಗುವುದಿಲ್ಲ. ನಾನು ಏನೂ ಮಾಡದಿದ್ದರೂ ನನ್ನನ್ನು ಗಾಂಜಾ ವ್ಯಸನಿಯೇ ಎಂದು ಕೀಳಾಗಿ ನೋಡಿ ಹಿಯಾಳಿಸಿದರು. ನನ್ನಿಂದ ಈ ರೀತಿ ಜೀವಿಸಲು ಸಾಧ್ಯವಿಲ್ಲ. ಈ ಅವಮಾನ ಸಹಿಸಲು ಆಗ್ತಿಲ್ಲ... I AM VERY SORRY MOM DAD. ಇನ್ನೊಂದು ಜನ್ಮ ಇದ್ದರೆ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ...' ಎಂದು ಡೆತ್​ನೋಟ್​ ಬರೆದಿಟ್ಟು ಮೈಸೂರಿನ ಫೋಟೋಗ್ರಾಫರ್​ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಭಿಷೇಕ ಮೃತ ಯುವಕ. ಮೈಸೂರಿನ ಅಶೋಕಪುರಂ ಠಾಣೆ ಪೊಲೀಸರ ಹೆಸರು ಪ್ರಸ್ತಾಪಿಸಿ ಸಾವಿನ ಮನೆಯ ಕದತಟ್ಟಿರುವುದು ದುರಂತ. ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರ ವಿಚಾರಣೆ ಎದುರಿಸಿ ಬಂದ ಬೆನ್ನಲ್ಲೇ ಯುವಕನ ಆತ್ಮಹತ್ಯೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಗಾಂಜಾ ಸೇವನೆ ಆರೋಪದಡಿ ಪೊಲೀಸ್ ವಿಚಾರಣೆಯನ್ನ ಇತ್ತೀಚಿಗೆ ಅಭಿಷೇಕ ಎದುರಿಸಿದ್ದ.

'ಸ್ನೇಹಿತನೊಬ್ಬನಿಂದ ಬರಬೇಕಿದ್ದ ಸಾಲದ ಹಣ ಪಡೆಯಲು ನಾನು ತೆರಳಿದ್ದೆ. ಕೆಲವರು ಗಾಂಜಾ ಸೇವನೆ ಮಾಡಿದ್ದರು. ಆ ಸಮಯದಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಗಾಂಜಾ ಸೇವನೆ ಮಾಡಿದವರ ಜತೆಗೆ ನನ್ನನ್ನೂ ಪೊಲೀಸ್ ಠಾಣೆಗೆ ಕರೆದೊಯ್ದರು. ನೀನು ಗಾಂಜಾ ವ್ಯಸನಿಯೇ ಎಂದು ಕೀಳಾಗಿ ನೋಡಿ ಹಿಯಾಳಿಸಿದರು. ನನ್ನಿಂದ ಈ ರೀತಿ ಜೀವಿಸಲು ಸಾಧ್ಯವಿಲ್ಲ. ಈ ತರಹದ ದೂರುಗಳನ್ನ ಸಹಿಸಲು ನನ್ನಿಂದ ಅಸಾಧ್ಯ. ಕೊಲೆಯಾದ ಸ್ಥಳದಲ್ಲಿ ಇದ್ದ ಮಾತ್ರಕ್ಕೆ ಯಾರೂ ಕೊಲೆಗಾರ ಆಗುವುದಿಲ್ಲ. ಅಪ್ಪ- ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ' ಎಂದು ಡೆತ್​ನೋಟ್​ ಬರೆದಿಟ್ಟು ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.