J&K: ಕಳೆದ ಒಂದೂವರೆ ತಿಂಗಳಲ್ಲಿ ಮೂರು ಪ್ರತ್ಯೇಕ ಕುಟುಂಬದಿಂದ ಬರೋಬ್ಬರಿ 17 ಮಂದಿ ನಿಗೂಢ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿರುವುದು ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸಿದೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಬಾಧಾಲ್ ಗ್ರಾಮದ 17 ಜನರು ನಿಗೂಢ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಇದರ ಹಿಂದಿರುವ ಕಾರಣವೇನು ಎಂಬುದೇ ಇಂದಿಗೂ ಅಸ್ಪಷ್ಟವಾಗಿದೆ. ಈ ಹಿನ್ನೆಲೆ ಜಿಲ್ಲಾಡಳಿತ ವೈದ್ಯಕೀಯ ಅಧಿಕಾರಿಗಳು, ವೈದ್ಯರು ಮತ್ತು ಸಿಬ್ಬಂದಿಗಳ ಎಲ್ಲಾ ರಜೆಗಳನ್ನು ರದ್ದುಗೊಳಿಸಿದೆ.
ಮೂರು ಕುಟುಂಬದ ಒಟ್ಟು 17 ಮಂದಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವುದೇ ಸದ್ಯ ವೈದ್ಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೃತಪಟ್ಟವರನ್ನು ಕಾಡಿದ ಸಮಸ್ಯೆ ಏನು? ತಗುಲಿದ ಸೋಂಕಿನ ಬಗ್ಗೆ ಯಾವ ಮಾಹಿತಿಯು ವೈದ್ಯಕೀಯ ಪರೀಕ್ಷೆಗಳಲ್ಲಿ ಲಭಿಸಿಲ್ಲ. 17 ಜನರ ನಿಗೂಢ ಸಾವಿನ ಬೆನ್ನಲ್ಲೇ ಹಲವರಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಅವರನ್ನೆಲ್ಲ ಸದ್ಯ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಇತ್ತೀಚಿನ ವರದಿ ಅನುಸಾರ, ಕ್ವಾರಂಟೈನ್‌ಗೆ ಹೋದವರ ಸಂಖ್ಯೆ ಈಗ 230ಕ್ಕೆ ಏರಿದೆ.
"ಲಕ್ನೋದಲ್ಲಿನ ವಿಷಶಾಸ್ತ್ರ ಪ್ರಯೋಗಾಲಯವು ನಡೆಸಿದ ಆರಂಭಿಕ ತನಿಖೆಯು ಮೃತಪಟ್ಟವರಲ್ಲಿ ಯಾವುದೇ ಸೋಂಕು, ವೈರಸ್ ಅಥವಾ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿಲ್ಲ. ಆದ್ರೆ, ಯಾವುದೋ ವಿಷ ಅಂಶವಿರುವುದು ಖಚಿತ ಎಂದು ದೃಢಪಡಿಸಿದೆ" ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಭಾರೀ ಆತಂಕದ ಹಿನ್ನೆಲೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜೌರಿ ಸರ್ಕಾರಿ ವೈದ್ಯಕೀಯ ಕಾಲೇಜು (ಜಿಎಂಸಿ) ಆಸ್ಪತ್ರೆಯ ಪ್ರಾಂಶುಪಾಲ ಡಾ. ಅಮರ್‌ಜೀತ್ ಸಿಂಗ್ ಭಾಟಿಯಾ, "ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಎಲ್ಲಾ ರಜೆಗಳನ್ನು ರದ್ದುಗೊಳಿಸಲಾಗಿದೆ. ಕಳೆದ ಒಂದೂವರೆ ತಿಂಗಳಲ್ಲಿ ಮೂರು ಕುಟುಂಬಗಳ 17 ಜನರು ನಿಗೂಢ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ಇದು ನಮಗೆ ಎಚ್ಚರಿಕೆಯ ಗಂಟೆ. ಪರಿಸ್ಥಿತಿಯನ್ನು ನಿಭಾಯಿಸಲು ಚಳಿಗಾಲದ ರಜೆಗಳನ್ನು ಸಹ ರದ್ದುಗೊಳಿಸಲಾಗಿದೆ" ಎಂದು ಹೇಳಿದರು.
ಜನರಲ್ಲಿ ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಡುತ್ತಿದ್ದಂತೆ ಹೆಚ್ಚುವರಿ ವೈದ್ಯಕೀಯ ವ್ಯವಸ್ಥೆಗೆ ಸಹಾಯ ಕೋರಲು ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಜಿಎಂಸಿ ರಾಜೌರಿಗೆ 10ಕ್ಕೂ ಅಧಿಕ ವೈದ್ಯಕೀಯ ವಿದ್ಯಾರ್ಥಿಗಳನ್ನು ನಿಯೋಜಿಸಿದೆ. ಬಾಧಾಲ್ ಗ್ರಾಮದ ಮೊಹಮ್ಮದ್ ಫಜಲ್, ಮೊಹಮ್ಮದ್ ಅಸ್ಲಾಂ ಮತ್ತು ಮೊಹಮ್ಮದ್ ರಫೀಕ್ ಅವರ ಕುಟುಂಬದಿಂದ 13 ಮಕ್ಕಳು ಸೇರಿದಂತೆ ಒಟ್ಟು 17 ಮಂದಿ ಕಳೆದ ಒಂದೂವರೆ ತಿಂಗಳಲ್ಲಿ ಸಾವನ್ನಪ್ಪಿದ್ದಾರೆ. ಕೇಂದ್ರ ಸರ್ಕಾರದ ತಂಡ ಮತ್ತು ಪೊಲೀಸ್ ಪಡೆ ನಿಗೂಢ ಸಾವಿನ ಬಗ್ಗೆ ಪ್ರತ್ಯೇಕ ತನಿಖೆ ಮುಂದುವರಿಸಿದೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).