ನ್ಯೂಸ್

ನೋಡ ನೋಡುತ್ತಿದ್ದಂತೆ ರಸ್ತೆಯಲ್ಲಿ ಹರಿಯಿತು ರಕ್ತದ ಕೋಡಿ; ಆಘಾತಕಾರಿ Video Viral

ಹೈದರಾಬಾದ್​: ಆಘಾತಕಾರಿ ಘಟನೆಯೊಂದರಲ್ಲಿ ರಸ್ತೆಯ ತುಂಬೆಲ್ಲಾ ರಕ್ತದ ನೀರು ಹರಿದು ಜನರಿಗೆ ಭಯವನ್ನುಂಟು ಮಾಡಿರುವ ಘಟನೆ ತೆಲಂಗಾಣ ರಾಜಧಾನಿ ಹೈದರಾಬಾದಿನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ (Video Viral) ಆಗಿದ್ದು, ಜನರು ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.

ಹೈದರಾಬಾದ್‌ನ ಜೀಡಿಮೆಟ್ಲಾ ಇಂಡಸ್ಟ್ರಿಯಲ್ ಎಸ್ಟೇಟ್ ಸಮೀಪವಿರುವ ವೆಂಕಟಾದ್ರಿ ನಗರದಲ್ಲಿ ನವೆಂಬರ್​ 26ರ ಸಂಜೆ ಈ ಘಟನೆ ನಡೆದಿದ್ದು, ಏಕಾಏಕಿ ರಸ್ತೆಯಲ್ಲಿ ರಕ್ತದ ನೀರು ಹರಿಯುತ್ತಿರುವುದನ್ನು ನೋಡಿ ಜನರು ಭಯಭೀತರಾಗಿದ್ದಾರೆ. ದುರ್ವಾಸನೆಯಿಂದ ಕೂಡಿದ್ದ ನೀರು ಹರಿದ ಪರಿಣಾಮ ಜನರಿಗೆ ಉಸಿರಾಡಲು ಕಷ್ಟವಾಗಿದ್ದು, ಅಧಿಕಾರಿಗಳು ಇದನ್ನು ಸರಿಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸ್ಥಳೀಯ ನಿವಾಸಿಯೊಬ್ಬರು, ಈ ಪ್ರದೇಶದಲ್ಲಿ ಕೈಗಾರಿಕಾ ತ್ಯಾಜ್ಯ ವಿಲೇವಾರಿಯಾಗುತ್ತಿರುವ ಬಗ್ಗೆ ಅಧಿಕಾರಿಗಳು ಯಾವುದೇ ನಿಗಾ ವಹಿಸುತ್ತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ಜಿಎಚ್‌ಎಂಸಿ ಈ ತ್ಯಾಜ್ಯವನ್ನು ಬೀದಿಗೆ ಸುರಿಯುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಡ್ರೈನೇಜ್​ಗೆ ಅವಧಿ ಮೀರಿದ ಪೈಂಟ್​ ಸುರಿದ ಕಾರಣ ಈ ರೀತಿಯಾಗಿರಬಹುದು ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಹೈದರಾಬಾದ್ ಮೆಟ್ರೋಪಾಲಿಟನ್ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (HMWS&SB) ಅಧಿಕಾರಿಯೊಬ್ಬರು, ಡ್ರೈನೇಜ್​ನಿಂದ ಈ ರೀತಿಯಾಗಿದೆ ಎಂದು ಹೇಳಲಾಗದು. ರಾಸಾಯನಿಕ ತ್ಯಾಜ್ಯವನ್ನು ನೇರವಾಗಿ ರಸ್ತೆಗೆ ಎಸೆಯಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು HMWS&SB ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.