ನ್ಯೂಸ್

VIDEO| ಸುಮಾರು 10 ಅಡಿ ಉದ್ದದ ನಿಗೂಢ ಜೀವಿ ನೋಡಿ ಬೆಚ್ಚಿಬಿದ್ದ ಗ್ರಾಮಸ್ಥರು!

ಬೀಜಿಂಗ್​: ಜಲಾಶಯವೊಂದರಲ್ಲಿ ಈಜುತ್ತಾ ಸಾಗುತ್ತಿದ್ದ ಸಂಶಯಾಸ್ಪದ ನಿಗೂಢ ಜೀವಿಯನ್ನು ವಿಡಿಯೋ ಮಾಡಿಕೊಂಡ ಕೇಂದ್ರ ಚೀನಾದ ಗ್ರಾಮಸ್ಥರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

ಚೀನಾದ ಲುಯಾಂಗ್​ ಹೆನಾನ್​ ಪ್ರಾಂತ್ಯದಲ್ಲಿ ಬರುವ ಗ್ರಾಮವೊಂದರ ಜಲಾಶಯದಲ್ಲಿ 10 ಅಡಿ ಉದ್ದದ ಜೀವಿ ಈಜುತ್ತಾ ತೆರಳುವುದನ್ನು ನೋಡಿದ್ದಾರೆ. ಇದೊಂದು ಪೌರಾಣಿಕ ಸರೋವರ ದೈತ್ಯ ಪ್ರಾಣಿ ಎಂದು ಭಾವಿಸಿರುವ ಗ್ರಾಮಸ್ಥರು ಅದನ್ನು ವಿಡಿಯೋ ಸಹ ಮಾಡಿಕೊಂಡಿದ್ದಾರೆ.

ಗ್ರಾಮಸ್ಥರು ಶೇರ್​ ಮಾಡಿರುವ ವಿಡಿಯೋದಲ್ಲಿ ನಿಗೂಢ ಜೀವಿಯೊಂದು ವೇಗವಾಗಿ ಮೇಲೆ, ಕೆಳಗೆ ಚಲಿಸುತ್ತಾ ಸಾಗುವುದನ್ನು ಕಾಣಬಹುದಾಗಿದೆ. ಇದು ಟಿಕ್​ಟಾಕ್​ ರೀತಿಯ ಚೀನಾದ ಡುಯಿನ್​ ಆ್ಯಪ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ನಿನ್ನೆ (ಗುರುವಾರ) ಮಧ್ಯಾಹ್ನ ಜಲಾಶಯದಲ್ಲಿ ಈ ಜೀವಿ ಕಾಣಿಸಿಕೊಂಡಿದೆ. ಡ್ರ್ಯಾಗನ್​ ರೀತಿಯ ವಿಚಿತ್ರ ಶಬ್ದ ಬಂದ ಬೆನ್ನಲ್ಲೇ ಗ್ರಾಮಸ್ಥರು ಯಾವುದಿದು ಶಬ್ದ ಎಂದು ಹುಡುಕಾಡಿದಾಗ ಈ ವಿಚಿತ್ರ ಸನ್ನಿವೇಶ ಎದುರಾಗಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಾಮೆಂಟ್​ಗಳು ಹರಿದುಬರುತ್ತಿದ್ದು, ಕೆಲವರು ಇದನ್ನು ನಂಬಲು ಸಾಧ್ಯವಿಲ್ಲ ಎಂದರೆ, ಇನ್ನು ಕೆಲವರು ಇದು ಮೊಸಳೆಯೋ ಅಥವಾ ಹಾವು ಇರಬಹುದು ಎಂದು ಹೇಳಿದ್ದಾರೆ. ಮೀನುಗಳ ಗುಂಪು ಒಟ್ಟಾಗಿ ಈಜಿರಬಹುದು. ಈ ರೀತಿ ಅನೇಕ ಬಾರಿ ನೋಡಿದ್ದೇವೆ ಎಂದು ನೆಟ್ಟಿಗರು ತಿಳಿಸಿದ್ದಾರೆ. (ಏಜೆನ್ಸೀಸ್​)