ನ್ಯೂಸ್

ಇತಿಹಾಸದಲ್ಲೇ ಪ್ರಥಮ ಬಾರಿಗೆ 11 ದಿನ ಮೈಸೂರು ದಸರಾ ಆಚರಣೆ; ಈ ನಿರ್ಧಾರ ಕೈಗೊಳ್ಳಲು ಕಾರಣವೇನು?mysuru dasara

ಮೈಸೂರು: ಈ ಬಾರಿಯ 2025ರ ಮೈಸೂರು ದಸರಾ ಮಹೋತ್ಸವ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇಷ್ಟು ವರ್ಷಗಳ ಕಾಲ ಮೈಸೂರು ದಸರಾವನ್ನು 10 ದಿನಗಳ ಕಾಲ ಆಯೋಜನೆ ಮಾಡಲಾಗುತ್ತಿತ್ತು. ಆದರೆ ಈ ವರ್ಷ ದಸರಾ ಆಚರಣೆಯಲ್ಲಿ ಅಲ್ಪ ಬದಲಾಣೆಯಾಗಿದ್ದು, 10 ದಿನಗಳ ಬದಲಾಗಿ 11 ದಿನಗಳವರೆಗೆ ದಸರಾವನ್ನು ನಡೆಸಲು ತೀರ್ಮಾನಿಸಲಾಗಿದೆ.

ಈ ಬಾರಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ದಸರಾ ಮಹೋತ್ಸವ ನಡೆಯಲಿದ್ದು, ಎರಡು ದಿನ ಪಂಚಮಿ ಇರುವುದು ವಿಶೇಷ. ಹಾಗಾಗಿ ಒಂದು ದಿನ ಹೆಚ್ಚಾಗಿ ದಸರಾ ಆಚರಣೆ ಮಾಡುವುದು ಒಳ್ಳೆಯದರ ಸಂಕೇತ ಎಂದು ಹಿರಿಯ ಆಧ್ಯಾತ್ಮಿಕ ಚಿಂತಕರಾದ ಡಾ. ಶೆಲ್ವಪಿಳೈ ಅಯ್ಯಂಗಾರ್ ಅವರು ಮಾಹಿತಿ ನೀಡಿದ್ದಾರೆ.

ದಸರಾ ಆಚರಣೆ 11 ದಿನ ಏಕೆ?

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ವಿಜಯನಗರ ಸಾಮ್ರಾಜ್ಯದ ಅರಸರು 1399 ರಲ್ಲಿ ಈ ಆಚರಣೆಯನ್ನು ಆರಂಭಿಸಿದರು. ಬಳಿಕ, 1410 ರಲ್ಲಿ ಮೈಸೂರು ಸಂಸ್ಥಾನದ ಅರಸರು ಇದನ್ನು ಮುಂದುವರೆಸಿಕೊಂಡು ಬಂದರು. ಆದರೆ ಕಳೆದ ಅಷ್ಟೂ ವರ್ಷಗಳಲ್ಲಿ ಇದುವರೆಗೂ ಸಹ 11 ದಿನಗಳ ಕಾಲ ದಸರಾ ಆಚರಿಸಿರುವ ಉದಾಹರಣೆಗಳಿಲ್ಲ.

ಈ ಬಾರಿ ದಸರಾದಲ್ಲಿ ಮೈಸೂರಿಗರಿಗೆ ಸಂಭ್ರಮ ಇನ್ನೊಂದು ದಿನ ಹೆಚ್ಚಾಗಿ ಇರಲಿದೆ. ಇದರಲ್ಲಿ ಅಪಶಕುನದ ಮಾತೇನು ಇಲ್ಲ. ಎಲ್ಲ ಒಳ್ಳೆಯದೇ ಆಗಲಿದೆ. ಹನ್ನೊಂದು ದಿನಗಳ ದಸರಾ ಬಗ್ಗೆ ವದಂತಿ ಹರಡಬೇಕಿಲ್ಲ ಎಂದು ಶೆಲ್ವ ಪಿಳೈ ಅಯ್ಯಂಗಾರ್ ತಿಳಿಸಿದ್ದಾರೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಮತ್ತು ಪಂಚಾಂಗಗಳಲ್ಲಿ ಹನ್ನೊಂದು ಎಂಬುದು ಅತ್ಯಂತ ಮುಖ್ಯವಾದ ಸಂಖ್ಯೆಯಾಗಿದೆ. ಯಾಕೆಂದರೆ ಗ್ರಹಗಳು ಮೂರು, ಆರು, ಎಂಟು ಅಥವಾ ಹನ್ನೆರಡರಲ್ಲಿ ಇದ್ದರೆ ಶುಭ ಎಂದು ಪರಿಗಣಿಸುವುದಿಲ್ಲ. ಈ ತರ ಇದ್ದರೆ ಅವುಗಳು ಒಳಿತು ಮಾಡುವುದಿಲ್ಲ. ಹಾಗಾಗಿ ಗ್ರಹಗಳು ಹನ್ನೊಂದನೇ ಜಾಗಕ್ಕೆ ಬಂದರೆ ಒಳಿತು ಮಾಡುತ್ತವೆ. ಅದು ಶನೈಶ್ಚರ, ಮಂಗಳ, ರಾಹು, ಕೇತು, ಯಾವುದೇ ಗ್ರಹಗಳಾಗಿರಬಹುದು, ಹನ್ನೊಂದನೇ ಜಾಗದಲ್ಲಿ ಇದ್ದರೆ ಒಳಿತನ್ನೇ ಮಾಡುತ್ತವೆ. ಹಿಗಾಗಿ 11 ಎಂಬುದಕ್ಕೆ ನಮ್ಮ ಪರಂಪರೆಯಲ್ಲಿ ಮಹತ್ವದ ಸ್ಥಾನವಿದೆ ಎಂದು ಡಾ. ಶೆಲ್ವ ಪಿಳೈ ಅಯ್ಯಂಗಾರ್ ವಿಶ್ಲೇಷಿಸಿದ್ದಾರೆ.