PM Modi: ಬಿಹಾರದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಕೂಟದ ವೇದಿಕೆಯಲ್ಲಿ ದಿವಂಗತ ನನ್ನ ತಾಯಿಯನ್ನು ನಿಂದಿಸಲಾಗಿದ್ದು, ಇದು ಭಾರತದ ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಯನ್ನು ಅವಮಾನಿಸಿದಂತೆ ಎಂದು ಮಂಗಳವಾರ (ಸೆ. 02) ಪ್ರಧಾನಿ ಮೋದಿ ಇಂಡಿಯಾ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದಲ್ಲಿ ಮಹಿಳಾ ಉದ್ಯಮಿಗಳಿಗೆ ಸುಲಭ ನಿಧಿಯನ್ನು ಒದಗಿಸಲು ಬಿಹಾರ ರಾಜ್ಯ ಜೀವಿಕಾ ನಿಧಿ ಸಹಕಾರಿ ಸಂಘ ಲಿಮಿಟೆಡ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬಿಹಾರದಲ್ಲಿ ಆರ್‌ಜೆಡಿ-ಕಾಂಗ್ರೆಸ್ ಪಕ್ಷದ ರ್ಯಾಲಿಯಲ್ಲಿ ನನ್ನ ತಾಯಿಗೆ ಆಡುಭಾಷೆಯಲ್ಲಿ ನಿಂದಿಸಲಾಗುತ್ತಿತ್ತು. ಈ ನಿಂದನೆ ನನ್ನ ತಾಯಿಯನ್ನು ಮಾತ್ರವಲ್ಲದೆ, ಭಾರತದ ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಯನ್ನು ಅವಮಾನಿಸಿವೆ. ಅದನ್ನು ಕೇಳಿದ ಬಳಿಕ ನಿಮಗೂ ನನ್ನಷ್ಟೇ ನೋವಾಗಿದೆ ಎಂದು ನನಗೆ ತಿಳಿದಿದೆ ಎಂದು ಹೇಳಿದರು.
ದಿವಂಗತ ತಾಯಿ ಹೀರಾಬೆನ್ ಮೋದಿಯವರು ನನ್ನ ಮತ್ತು ನನ್ನ ಒಡಹುಟ್ಟಿದವರನ್ನು ಬೆಳೆಸಲು ಬಡತನದ ವಿರುದ್ಧ ಹೋರಾಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದರು ನಮಗೋಸ್ಕರ ಕೆಲಸ ಮಾಡ್ತಿದ್ದರು. ನಮಗೆ ಬಟ್ಟೆ ಕೊಡಿಸಲು ಅವರು ಪ್ರತಿ ಪೈಸೆಯನ್ನೂ ಉಳಿಸುತ್ತಿದ್ದರು. ನಮ್ಮ ದೇಶದಲ್ಲಿ ಅಂತಹ ಕೋಟ್ಯಂತರ ತಾಯಂದಿರಿದ್ದಾರೆ. ತಾಯಿಯ ಸ್ಥಾನ ದೇವರು ಮತ್ತು ದೇವತೆಗಳಿಗಿಂತ ಹೆಚ್ಚಾಗಿದೆ ಎಂದರು.
ರಾಜಮನೆತನದಲ್ಲಿ ಜನಿಸಿದ ರಾಜಕುಮಾರರು ದೀನದಲಿತರ ತಾಯಿಯ ನೋವು, ಆಕೆಯ ಮಗನ ಹೋರಾಟಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅವರು ಚಿನ್ನ ಮತ್ತು ಬೆಳ್ಳಿ ಚಮಚದೊಂದಿಗೆ ಹುಟ್ಟಿದ್ದಾರೆ. ಬಿಹಾರದಲ್ಲಿನ ಅಧಿಕಾರವು ಅವರ ಕುಟುಂಬಗಳಿಗೆ ಸೇರಿದ್ದು ಎಂದು ತಿಳಿಯುತ್ತಾರೆ. ಆದರೆ ನೀವು ದೀನದಲಿತ ತಾಯಿಯ ಮಗನನ್ನು ಆಶೀರ್ವದಿಸಿ ಪ್ರಧಾನ ಸೇವಕನನ್ನಾಗಿ ಮಾಡಿದ್ದೀರಿ. ನಾಮದಾರ್ಗಳಿಗೆ ಇದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ(SIR) ಮತ್ತು ಮತಗಳ್ಳತನ ವಿರೋಧಿಸಿ ರಾಹುಲ್ ಗಾಂಧಿ ಮತ್ತು ಇಂಡಿಯಾ ಮೈತ್ರಿಕೂಟ ನಡೆಸಿದ ಮತದಾರರ ಅಧಿಕಾರ ಯಾತ್ರೆ ವೇಳೆ ಬಿಹಾರದ ದರ್ಭಾಂಗ್ ಜಿಲ್ಲೆ ಪ್ರವೇಶಿಸಿದಾಗ ಯಾತ್ರೆಯಲ್ಲಿ ವ್ಯಕ್ತಿಯೊಬ್ಬ ಪ್ರಧಾನಿ ಮೋದಿ ಬಗ್ಗೆ ವೈಯಕ್ತಿಕವಾಗಿ ಕೀಳುಮಟ್ಟದಲ್ಲಿ ನಿಂದಿಸಿದ್ದ. ಆ ವ್ಯಕ್ತಿ ವಿರುದ್ದ ಎಫ್ಐಆರ್ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)