ಆಂಧ್ರಪ್ರದೇಶ: ಇತ್ತೀಚೆಗೆ ಆಂಧ್ರ ಪ್ರದೇಶದ ಕಾಶಿಬುಗ್ಗಾದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಭಾರಿ ಜನದಟ್ಟಣೆ ಉಂಟಾಗಿ ಕಾಲ್ತುಳಿತ (Kashibugga Stampede) ಸಂಭವಿಸಿ ಎಂಟು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಒಂಬತ್ತು ಭಕ್ತರು ಸಾವನ್ನಪ್ಪಿದರು.
ಈ ವಿಷಯವಾಗಿ ಆರೋಪ ಪ್ರತ್ಯಾರೋಪ ಜೋರಾಗಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೇವಾಲಯದ ಮುಖ್ಯಸ್ಥ ಹರಿಮುಕುಂದ ಪಾಂಡಾ ನನ್ನ ಖಾಸಗಿ ಭೂಮಿಯಲ್ಲಿ ದೇವಾಲಯ ನಿರ್ಮಿಸಿದ್ದೇನೆ. ನಾನು ಪೊಲೀಸರಿಗೆ ಅಥವಾ ಆಡಳಿತಕ್ಕೆ ಏಕೆ ಮಾಹಿತಿ ನೀಡಬೇಕು? ಎಂದು ಪ್ರಶ್ನಿಸಿದರು.
ಜನಸಂದಣಿಯನ್ನು ನಿರ್ವಹಿಸಲು ವ್ಯವಸ್ಥೆ ಮಾಡಬಹುದಿತ್ತು ಎಂದಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಈ ದುರಂತಕ್ಕೆ ದೇವಾಲಯದ ಅಧಿಕಾರಿಗಳನ್ನು ದೂಷಿಸಿದರು. ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದು ತಿರುಗೇಟು ನೀಡಿರುವ ಪಾಂಡಾ ನೀವು ಬಹು ಪ್ರಕರಣಗಳನ್ನು ದಾಖಲಿಸಬಹುದು. ನನಗೆ ಯಾವುದೇ ಸಮಸ್ಯೆಗಳಿಲ್ಲ ಎಂದರು.
ದೇವಸ್ಥಾನದಲ್ಲಿ ಸಾಮಾನ್ಯವಾಗಿ ಜನಸಂದಣಿ ಕಡಿಮೆ ಇರುತ್ತದೆ. ದೇವರ ದರ್ಶನದ ನಂತರ, ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ ಮತ್ತು ಅವರು ಹೊರಟು ಹೋಗುತ್ತಾರೆ. ನಾನು ಏನನ್ನೂ ಕೇಳುವುದಿಲ್ಲ. ನಾನು ನನ್ನ ಸ್ವಂತ ಹಣದಿಂದ ಆಹಾರ ಮತ್ತು ಪ್ರಸಾದವನ್ನು ಬೇಯಿಸುತ್ತೇನೆ. ದುರಂತದ ನಂತರ ದೇವಾಲಯವನ್ನು ಮುಚ್ಚಲಾಗಿದೆ. ಈಗ ಅದರ ಪ್ರವೇಶದ್ವಾರದಲ್ಲಿ ಬೀಗ ಹಾಕಲಾಗಿದ್ದು, ಅದರ ಆವರಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.(ಏಜೆನ್ಸೀಸ್)