ನ್ಯೂಸ್

ನನ್ನ ಹೊಟೇಲ್​​ 50 ರೂ. ವ್ಯಾಪಾರ ಮಾಡಿದೆ, ನನ್ನ ನೋವನ್ನು ಅರ್ಥಮಾಡಿಕೊಳ್ಳಿ: ಸಂತ್ರಸ್ತರ ಎದುರು ಕಂಗನಾ ಅಳಲು!

ಹಿಮಾಚಲ ಪ್ರದೇಶದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಪೀಡಿತ ನಿವಾಸಿಗಳನ್ನು ಮಂಡಿಯ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರನೌತ್ ಗುರುವಾರ ಭೇಟಿಯಾದಾಗ ಮನಾಲಿಯಲ್ಲಿನ ತಮ್ಮ ರೆಸ್ಟೋರೆಂಟ್‌ನಲ್ಲಿ ಉಂಟಾದ ಆರ್ಥಿಕ ನಷ್ಟದ ಬಗ್ಗೆ ತಮ್ಮ ಜನರ ಬಳಿಯೇ ತಮ್ಮ ದುಃಖವನ್ನು ವ್ಯಕ್ತಪಡಿಸಿದ ವಿಡಿಯೋದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್​ ಆಗಿದೆ.

ಮಂಡಿ ಕ್ಷೇತ್ರದ ಡಜನ್​ಗಟ್ಟಲೇ ಕುಟುಂಬಗಳು ಭೂಕುಸಿತ ಹಾಗೂ ಹಠಾತ್ ಪ್ರವಾಹದಿಂದಾಗಿ ಪರಿಣಾಮಗಳನ್ನು ಎದುರಿಸುತ್ತಿರುವಾಗ ಸಂಸದೆ ರನೌತ್​​ ಹೇಳಿರುವ ಈ ಹೇಳಿಕೆಗಳು ಸ್ಥಳೀಯರನ್ನು ಕೆರಳಿಸಿದೆ.

ಹೌದು, ಮಂಡಿ ಕ್ಷೇತ್ರಕ್ಕೆ ಭೇಟಿ ನೀಡಿದ ಕಂಗಾನಗೆ ಈ ವೇಳೆ ‘ವಾಪಸ್‌ ಹೋಗಿ ಕಂಗನಾ, ನೀವು ತಡವಾಗಿ ಬಂದಿದ್ದೀರಿ’ ಎನ್ನುವ ಘೋಷಣೆಗಳನ್ನು ಅಲ್ಲಿನ ಜನ ಕೂಗಿದ್ದಾರೆ. ಕಂಗನಾ ಬರುತ್ತಿದ್ದಂತೆ ಸ್ಥಳೀಯ ಜನರು ಕಪ್ಪು ಬಾವುಟ ಹಿಡಿದು, ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂತಿತು.

ಈ ಮಳೆ, ಭೂಕುಸಿತ ಕಾರಣ "ಬುಧವಾರ ನನ್ನ ರೆಸ್ಟೋರೆಂಟ್ ಕೇವಲ 50ರೂ. ವ್ಯವಾಹರ ನಡೆಸಿದೆ. ನಾನು ಅವರಿಗೆ ತಿಂಗಳಿಗೆ 15 ಲಕ್ಷ ರೂ.ಸಂಬಳ ನೀಡುತ್ತೇನೆ. ದಯವಿಟ್ಟು ನನ್ನ ನೋವನ್ನು ಸಹ ಅರ್ಥಮಾಡಿಕೊಳ್ಳಿ. ನಾನು ಕೂಡ ಹಿಮಾಚಲಿ ಮತ್ತು ಈ ಸ್ಥಳದ ನಿವಾಸಿ" ಎಂದು ರನೌತ್​ ಹೇಳಿದ್ದಾರೆ. ಇದೀಗ ಈ ಹೇಳಿಕೆಯ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

'ದಿ ಮೌಂಟೇನ್ ಸ್ಟೋರಿ' ರೆಸ್ಟೋರೆಂಟ್

ಈ ವರ್ಷದ ಆರಂಭದಲ್ಲಿ ಮನಾಲಿಯಲ್ಲಿ ನಟಿ ರನೌತ್ 'ದಿ ಮೌಂಟೇನ್ ಸ್ಟೋರಿ' ಎಂಬ ಹೆಸರಿನ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದ್ದರು. ಅಲ್ಲದೆ, ಅಧಿಕೃತ ಹಿಮಾಚಲಿ ಪಾಕಪದ್ಧತಿಯನ್ನು ಪೂರೈಸುವ ಸ್ಥಳವಾಗಿ ಸಾಮಾಜಿಕ ಮಾಧ್ಯಮದಲ್ಲಿ ಅದನ್ನು ಪ್ರಚಾರ ಕೂಡ ಮಾಡಿದ್ದರು. ಪ್ರವಾಸೋದ್ಯಮವನ್ನು ಹೆಚ್ಚು ಅವಲಂಬಿಸಿರುವ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಕೆಫೆಯು ಈಗ ಮಳೆ ಮತ್ತು ಭೂಕುಸಿತದಿಂದ ಉಂಟಾದ ಅಡ್ಡಿಗಳಿಂದ ತನ್ನ ವ್ಯವಹಾರದ ಮೇಲೆ ಪರಿಣಾಮ ಬೀರಿದೆ.

ಹಿಮಾಚಲ ಪ್ರದೇಶ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಜೂನ್ 20 ರಂದು ಪ್ರಾರಂಭವಾದ ಮಳೆಗಾಲವು ರಾಜ್ಯಾದ್ಯಂತ ವ್ಯಾಪಕ ಹಾನಿಯನ್ನುಂಟುಮಾಡಿದೆ.

ಇಲ್ಲಿಯವರೆಗೆ ಕನಿಷ್ಠ 419 ಜನರು ಮೃತಪಟ್ಟಿದ್ದಾರೆ. ಅದರಲ್ಲಿ 237 ಸಾವುಗಳು ಮಳೆಗೆ ಸಂಬಂಧಿಸಿವೆ, ಇದರಲ್ಲಿ 52 ಭೂಕುಸಿತಗಳು, 45 ಕಡಿದಾದ ಇಳಿಜಾರುಗಳಿಂದ ಬೀಳುವಿಕೆ, 40 ಮುಳುಗುವಿಕೆ, 17 ಮೋಡದ ಸ್ಫೋಟ ಮತ್ತು 11 ದಿಢೀರ್ ಪ್ರವಾಹ ಸೇರಿವೆ. ಇದೇ ಅವಧಿಯಲ್ಲಿ ಕನಿಷ್ಠ 182 ಜನರು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿರುವ ವರದಿಯಾಗಿದೆ.(ಏಜೆನ್ಸೀಸ್​)