ಕೊಚ್ಚಿ: ಡ್ರೈವಿಂಗ್ ಮಾಡುತ್ತಾ ಮೊಬೈಲ್ ಚಾಟಿಂಗ್ ಬಿಜಿಯಾಗಿದ್ದ ಖಾಸಗಿ ಬಸ್ ಚಾಲಕನನ್ನು ಕೇರಳದ ಮೋಟಾರು ವಾಹನ ಇಲಾಖೆ (ಎಂವಿಡಿ) ವಶಕ್ಕೆ ಪಡೆದಿದೆ.
ಅಲುವಾ ಮತ್ತು ಥೀವರಾ ಮಾರ್ಗದ ನಡುವೆ ಸಂಚರಿಸುತ್ತಿದ್ದ ಖಾಸಗಿ ಬಸ್ನಲ್ಲಿ ಚಾಲಕ ರುಬೀಶ್ ಮೊಬೈಲ್ನಲ್ಲಿ ಚಾಟಿಂಗ್ ಮಾಡುತ್ತಾ ಡ್ರೈವಿಂಗ್ ಮಾಡುತ್ತಿದ್ದ. ಪ್ರಯಾಣಿಕರೊಬ್ಬರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಫೋಟೋ ವೈರಲ್ ಆಗುತ್ತಿದ್ದಂತೆ ಚಾಲಕ ರುಬೀಶ್ನನ್ನು ವಶಕ್ಕೆ ಪಡೆಯಲಾಗಿದೆ.
ಫೋಟೋವನ್ನು ನೋಡಿ ತಕ್ಷಣ ಕಾರ್ಯಪ್ರವೃತ್ತರಾದ ಎಂವಿಡಿ ಅಧಿಕಾರಿಗಳು ಬಸ್ ಚೇಸ್ ಮಾಡಿ ಚಾಲಕನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ಬಸ್ ಸಹ ಸೀಜ್ ಮಾಡಲಾಗಿದ್ದು, ಸ್ಪೀಡ್ ಗವರ್ನರ್ ಕಡಿತ ಸೇರಿದಂತೆ ಅನೇಕ ಗಂಭೀರ ಸ್ವರೂಪದ ಸಂಚಾರ ನಿಯಮ ಉಲ್ಲಂಘನೆಯಾಗಿರುವುದು ಗಮನಕ್ಕೆ ಬಂದಿದೆ.
ಡ್ರೈವಿಂಗ್ ಮಾಡುವಾಗ ಮೊಬೈಲ್ ಬಳಕೆ ಕಾನೂನಿಗೆ ವಿರುದ್ಧವಾಗಿದೆ. ಭಾರತದಲ್ಲಿ ಬಹುತೇಕರು ಡ್ರೈವಿಂಗ್ ಮಾಡುವಾಗ ಅಥವಾ ಇನ್ನಿತರ ಸಮಯದಲ್ಲಿ ಮೊಬೈಲ್ ಬಳಕೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)