ನ್ಯೂಸ್

ಬಿಡದಿಗೆ ಹೊರಟ ಮುತ್ತಪ್ಪ ರೈ ಅಂತಿಮ ಯಾತ್ರೆ

ರಾಮನಗರ: ಜಯಕರ್ನಾಟಕ ಸಂಘಟನೆ ಸಂಸ್ಥಾಪಕ, ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅಂತಿಮ ವಿಧಿವಿಧಾನ ಬಿಡದಿಯ ಅವರ ಸ್ವಗೃಹದ ಬಳಿ ಸಂಜೆ 4ಕ್ಕೆ ನೆರವೇರಲಿದ್ದು, ಆಸ್ಪತ್ರೆಯಿಂದ ಮನೆಯತ್ತ ಅಂತಿಮ ಯಾತ್ರೆ ಹೊರಟಿದೆ.

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಅವರನ್ನು ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಎರಡು ದಿನಗಳ‌ ಹಿಂದೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಸುಕಿನ 2 ಗಂಟೆ ಸುಮಾರಿನಲ್ಲಿ ಮೃತಪಟ್ಟಿದ್ದು, ಬೆಳಗ್ಗೆ 11.20ರ ಸುಮಾರಿಗೆ ಆಸ್ಪತ್ರೆಯಿಂದ ಮೃತದೇಹ ಹೊತ್ತು ಹೊರಟಿರುವ ಆಂಬುಲೆನ್ಸ್​ ಇನ್ನು ಕಲವೇ ಕ್ಷಣಗಳಲ್ಲಿ ಬಿಡದಿಗೆ ಬರಲಿದೆ.

ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಡದಿ ಬಳಿಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿರುವ ಪೊಲೀಸರು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಬಂದೋಬಸ್ತ್ ಮಾಡಿದ್ದಾರೆ.

ಕರೊನಾ ಲಾಕ್​ಡೌನ್ ಇರುವ ಕಾರಣ ಅಂತಿಮ ವಿಧಿವಿಧಾನ ಕಾರ್ಯದಲ್ಲಿ ಪಾಲ್ಗೊಳ್ಳಲು 25 ಜನರಿಗಷ್ಟೇ ಅವಕಾಶ ಮಾಡಿಕೊಟ್ಟಿರುವ ಪೊಲೀಸ್ ಇಲಾಖೆ, ಮಾಧ್ಯಮಗಳ ಚಿತ್ರೀಕರಣಕ್ಕೂ ಅವಕಾಶ ನೀಡಿಲ್ಲ. ಲಾಕ್​ಡೌನ್​ ನಿಯಮಕ್ಕೆ ಅಭಿಮಾನಿಗಳು ಸಹಕರಿಸಬೇಕು ಎಂದು ಮುತ್ತಪ್ಪ ರೈ ಸಂಬಂಧಿ ಪ್ರಕಾಶ್ ರೈ ಮನವಿ ಮಾಡಿದ್ದಾರೆ. ಮೃತದೇಹ ಹೊತ್ತು ಬೆಂಗಳೂರಿಂದ ಬಿಡದಿಗೆ ಬರುತ್ತಿರುವ ವಾಹನಕ್ಕೆ ದಾರಿಯುದ್ದಕ್ಕೂ ಅಲ್ಲಲ್ಲಿ ನಿಂತ ಮುತ್ತಪ್ಪ ರೈ ಅಭಿಮಾನಿಗಳು ದೂರದಿಂದಲೇ ಪುಷ್ಪನಮನ ಸಲ್ಲಿಸುತ್ತಿರುವ ದೃಶ್ಯ ಕಂಡು ಬಂತು.