ನ್ಯೂಸ್

ಸಂಗೀತ ಮಾಂತ್ರಿಕ ಉಸ್ತಾದ್ ಮೃತ್ಯು

ಕೋಲ್ಕತ್ತಾ: ಕ್ಯಾನ್ಸ್​ರ್​ನಿಂದ ಬಳಲುತ್ತಿದ್ದ ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್​ ಖಾನ್​ ಅವರು ನಿಧನ ಹೊಂದಿದ್ದಾರೆ. 55 ವರ್ಷದ ವಯಸ್ಸಿನಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ.

ಕ್ಯಾನ್ಸ್​ರ್​ನಿಂದ ಬಳಲುತ್ತಿರುವ ಆವರನ್ನು ಕಳೆದ ತಿಂಗಳು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಇದೀಗ ಅವರು ಮರಣ ಹೊಂದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಕೋಲ್ಕತ್ತಾದ ಪೀರ್ಲೆಸ್ ಆಸ್ಪತ್ರೆಯಲ್ಲಿ ಸಂಜೆ 6 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ. ರಶೀದ್ ಖಾನ್​ ಅಂತ್ಯಕ್ರಿಯೆ ಬುಧವಾರ (ನಾಳೆ) ನಡೆಯಲಿದೆ ಎಂದು ಕುಟುಂಬ ತಿಳಿಸಿದೆ.

2022ರಲ್ಲಿ ಕೇಂದ್ರ ಸರ್ಕಾರ ಇವರಿಗೆ ದೇಶದ ಮೂರನೇ ಅತ್ಯುನ್ನತ ನಾಗರೀಕ ಪುರಸ್ಕಾರವಾದ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. 1968ರ ಜು.1 ರಂದು ಜನಿಸಿದ್ದ ಉಸ್ತಾದ್‌ ರಶೀದ್‌ ಖಾನ್‌, ಹಿಂದೂಸ್ತಾನಿ ಸಂಗೀತ ಸಂಪ್ರದಾಯದ ಶಾಸ್ತ್ರೀಯ ಸಂಗೀತಗಾರರಾಗಿದ್ದರು. ಉಸ್ತಾದ್​ ರಾಂಪುರ-ಸಹಸ್ವಾನ್ ಘರಾನಾಗೆ ಸೇರಿದವರು. ಘರಾನಾ ಸಂಸ್ಥಾಪಕ ಇನಾಯತ್ ಹುಸೇನ್ ಖಾನ್ ಅವರ ಮೊಮ್ಮಗ. ಭಾರತರತ್ನ ಪಂಡಿತ್‌ ಭೀಮ್‌ಸೇನ್‌ ಜೋಶಿ ಅವರೇ ಒಮ್ಮೆ, ರಶೀದ್‌ ಖಾನ್‌ ಅವರ ಧ್ವನಿ ಕೇಳಿ ಭಾರತೀಯ ಗಾಯನ ಸಂಗೀತದ ಭವಿಷ್ಯದ ಭರವಸೆ ಎಂದು ಹೊಗಳಿದ್ದರು ಎನ್ನಲಾಗಿದೆ.

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಮೇರು ಸಾಧನೆ ಮಾಡಿದ್ದ ಉಸ್ತಾದ್‌ ರಶೀದ್‌ ಖಾನ್‌ ಅವರು ಆಸ್ಪತ್ರೆಯಲ್ಲೂ ಶಾಸ್ತ್ರೀಯ ಸಂಗೀತದ ಅಭ್ಯಾಸ ನಿಲ್ಲಿಸಿರಲಿಲ್ಲ. ಕ್ಯಾನ್ಸರ್‌ ಅವರನ್ನು ಬಾಧಿಸುತ್ತಿದ್ದರೂ, ಚಿಕಿತ್ಸೆ ಮಧ್ಯೆಯೇ ಅವರು ಸಂಗೀತಾಭ್ಯಾಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಉಸ್ತಾದ್‌ ರಶೀದ್‌ ಖಾನ್‌ ಅವರು ನಿಧನಕ್ಕೆ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.