ಚೆನ್ನೈ: ಏಳು ವರ್ಷದ ಬಾಲಕಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಅಮಾನುಷ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಾಂಕುಲಂನಲ್ಲಿ ನಡೆದಿದೆ.
ಅಷ್ಟಕ್ಕೂ ಈ ಹತ್ಯೆಗೆ ಕಾರಣ, ಬಾಲಕಿ ಟಿ.ವಿ.ರಿಮೋಟ್ ಕೇಳಿದ್ದು! ಮನೆಯಲ್ಲಿ ಕರೆಂಟ್ ಇಲ್ಲದ ಕಾರಣ, ಬಾಲಕಿ ಪಕ್ಕದ ಮನೆಗೆ ಹೋಗಿದ್ದಾಳೆ. ಅವರು ಬೇರೆ ಚಾನೆಲ್ ನೋಡುತ್ತಿದ್ದರು. ತಾನು ಬೇರೆ ಚಾನೆಲ್ ನೋಡಬೇಕು ಎಂದು ಆಕೆ ರಿಮೋಟ್ ಕೊಡುವಂತೆ ಹಠ ಮಾಡಿದ್ದಾಳೆ.
ಇದೇ ಕಾರಣಕ್ಕೆ ಸಿಟ್ಟಿಗೆದ್ದ ಮನೆಯ ಮಾಲೀಕ ಆಕೆಯನ್ನು ಹತ್ಯೆ ಮಾಡಿದ್ದಾನೆ! ಬಾಲಕಿ ಟಿ.ವಿ.ನೋಡಲು ಆಗಾಗ್ಗೆ ಪಕ್ಕದ ಮನೆಗೆ ಹೋಗುತ್ತಿದ್ದಳು. ನಿನ್ನೆ ಕೂಡ ಹೋಗಿದ್ದಾಳೆ. ಟಿ.ವಿ. ಚಾನೆಲ್ ಮನೆಯ ಮಾಲೀಕನ ಹತ್ತಿರ ಇತ್ತು. ಆತ ಯಾವುದೋ ಕಾರಣಕ್ಕೆ ತನ್ನ ತಂದೆಯ ಜತೆ ಜಗಳವಾಡುತ್ತಿದ್ದ. ಪರಿಸ್ಥಿತಿಯ ಬಗ್ಗೆ ಅರಿಯದ ಬಾಲಕಿ ರಿಮೋಟ್ ನೀಡುವಂತೆ ಹಠ ಮಾಡಿದ್ದಾಳೆ. ಆ ಸಿಟ್ಟನ್ನು ಬಾಲಕಿಯ ಮೇಲೆ ತೆಗೆದ ಆತ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ನಂತರ, ಯಾರಿಗೂ ವಿಷಯ ತಿಳಿಯಬಾರದು ಎನ್ನುವ ಕಾರಣಕ್ಕೆ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಮುಚ್ಚಿಟ್ಟು, ಎರಡು ಕಿ.ಮೀ. ದೂರದ ಕಾಲುವೆಗೆ ಬಿಸಾಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮದುವೆ ಆಗ್ತೇನೆ ಬಾರೇ ಎನ್ನುತ್ತ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟ-ಫೇಸ್ಬುಕ್ ಗೆಳೆಯನ ವಿರುದ್ಧ ಸಿನಿ ನಿರ್ದೇಶಕಿ ದೂರು
ಕಾಲುವೆ ಬಳಿ ನಡೆದುಕೊಂಡು ಹೋಗುತ್ತಿದ್ದ ಊರ ಯುವಕನೊಬ್ಬ ಅನುಮಾನಾಸ್ಪದವಾಗಿ ಬಿದ್ದಿದ್ದ ಪ್ಲಾಸ್ಟಿಕ್ ಡ್ರಮ್ ಅನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ವಿಚಾರಣೆ ನಡೆಸಿದಾಗ ಬಾಲಕರಿಬ್ಬರು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಡ್ರಮ್‌ನಲ್ಲಿ ಎಸೆದು ಹೋಗಿರುವುದಾಗಿ ಹೇಳಲಾಗಿತ್ತು. ಗ್ರಾಮಸ್ಥರು ಕೂಡ ಅದೇ ರೀತಿ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದರು. ಆದರೆ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ.
ಮೃತಪಟ್ಟ ಬಾಲಕಿಯ ತಾಯಿ ದಿನಗೂಲಿ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಬಾಲಕಿಯ ಪಕ್ಕದ ಮನೆಯವರ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.