ಜಸ್ಪರ (ಉತ್ತರಾಖಂಡ): ಉತ್ತರಾಖಂಡದ ಯುಎಸ್ ನಗರ ಜಿಲ್ಲೆಯ ಜಸ್ಪುರದಲ್ಲಿ ಕೇವಲ ಒಂದೂವರೆ ಸಾವಿರ ರೂಪಾಯಿ ವಿವಾದಕ್ಕೆ ಸಂಬಂಧಿಸಿದಂತೆ 60 ವರ್ಷದ ವ್ಯಕ್ತಿಯನ್ನು ನಾಲ್ವರು ಭೀಕರವಾಗಿ ಕೊಲೆ ಮಾಡಿದ್ದಾರೆ.
ಈ ಕೊಲೆ ನಡೆಯುತ್ತಿರುವುದನ್ನು ಸ್ಥಳದಲ್ಲಿಯೇ ಇದ್ದ ಕೆಲವರು ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಜಸ್ಪುರದ ನಾಯ್ ಬಸ್ತಿ ವಸಾಹತು ನಿವಾಸಿ ಗುಚ್ಚಾನ್ ಖಾನ್ ಎಂಬುವವರು ಮೃತಪಟ್ಟವರು. ಇವರ ಮಗ ನದೀಂ ಬಳಿ ನಾಲ್ವರು ಆರೋಪಿಗಳಾದ ರಿಜ್ವಾನ್, ನೌಷಾದ್, ಡ್ಯಾನಿಷ್ ಮತ್ತು ಅಕ್ರಂ ಒಂದೂವರೆ ಸಾವಿರ ರೂಪಾಯಿ ಹಣ ಪಡೆದಿದ್ದರು. ಅದರೆ ಅವರು ಅದನ್ನು ವಾಪಸ್ ಮಾಡುತ್ತಿರಲಿಲ್ಲ.
ಈ ಹಿನ್ನೆಲೆಯಲ್ಲಿ ನದೀಂ ತಂದೆ, ಇದರ ಬಗ್ಗೆ ಮಾತನಾಡಲು ಆರೋಪಿಗಳ ಬಳಿ ಹೋಗಿದ್ದರು. ಅಲ್ಲಿ ಮಾತಿಗೆ ಮಾತು ಬೆಳೆದಿದೆ. ಆವೇಷದಲ್ಲಿ ನಾಲ್ವರು ಆರೋಪಿಗಳು ವೃದ್ಧನನ್ನು ಚೆನ್ನಾಗಿ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಬೀದಿಯಲ್ಲಿ ಎಳೆದೊಯ್ದ, ಕಠಾರಿಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ.
ಇದನ್ನು ನೋಡಿದ ಕೆಲವರು ತಡೆಯಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇನ್ನು ಕೆಲವರು ಇದರ ವಿಡಿಯೋ ಮಾಡುತ್ತಿದ್ದರು. ನಂತರ ಜನರು ಹೆಚ್ಚಾಗುತ್ತಿದ್ದಂತೆಯೇ ಎಲ್ಲಾ ಆರೋಪಿಗಳು ಪರಾರಿಯಾಗಿದ್ದಾರೆ. ಸ್ಥಳೀಯರು ನದೀಂರನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.
ಪರಾರಿಯಾಗಿರುವ ಆರೋಪಿಗಳನ್ನು ಬಂಧಿಸಲು ಪೊಲೀಸರು ಎರಡು ಗುಂಪುಗಳನ್ನು ರೂಪಿಸಿದ್ದಾರೆ. ಆರೋಪಿಗಳ ವಿರುದ್ಧ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)