Murder Case: ತಾನು ಪ್ರೀತಿಸಿದ ಯುವತಿಯನ್ನೇ ಕೊಂದ ಆರೋಪದಲ್ಲಿ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು, ಒಡಿಶಾದ ಗಣಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಮೃತದೇಹ ಶುಕ್ರವಾರ (ಸೆ.05) ಪತ್ತೆಯಾಗಿದ್ದು, ಆಕೆ ನಾಪತ್ತೆಯಾದ ಎಂಟು ತಿಂಗಳ ಬಳಿಕ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: 2026ರ ಫಿಫಾ ವಿಶ್ವಕಪ್ ಆಡ್ತಾರ ಲಿಯೋನೆಲ್ ಮೆಸ್ಸಿ, ನಿವೃತ್ತಿಯ ಬಗ್ಗೆ ಪುಟ್ಬಾಲ್ ಲೆಜೆಂಡ್ ಹೇಳಿದ್ದೇನು! Lionel Messi
ಮೃತ ಯುವತಿಯನ್ನು ಕೇರ್‌ಟೇಕರ್ ನಿರುಪಮಾ ಪರಿದಾ ಎಂದು ಗುರುತಿಸಲಾಗಿದ್ದು, ಗಣಿ ಪ್ರದೇಶದಲ್ಲಿ ಯುವತಿಯ ಮೃತದೇಹ ಸಿಕ್ಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು, ಕೊಲೆ ಆರೋಪದಡಿ ದೇಬಾಸಿಸ್ ಬಿಸೋಯಿ ಎಂಬಾತನನ್ನು ಸದ್ಯ ಬಂಧಿಸಿದ್ದಾರೆ. ಮದುವೆ ಮಾಡಿಕೊಳ್ಳುವ ವಿಚಾರವಾಗಿ ತನಗೆ ನಂಬಿಕೆ ದ್ರೋಹ ಮಾಡಿದ ಕಾರಣಕ್ಕಾಗಿ, ಪ್ರೇಯಸಿಯನ್ನು ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಭುವನೇಶ್ವರದಲ್ಲಿ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ, ಈ ವರ್ಷದ ಜನವರಿ 24ರಂದು, ತನ್ನ ಹುಟ್ಟೂರು ರಾಣ್‌ಪುರಕ್ಕೆ ಹೋಗುತ್ತಿರುವುದಾಗಿ ಕುಟುಂಬಕ್ಕೆ ತಿಳಿಸಿದ್ದಳು. ಆದರೆ, ಅಂದು ಮನೆ ಬಿಟ್ಟವಳು ಕುಟುಂಬಸ್ಥರನ್ನು ಇಲ್ಲಿಯವರೆಗೆ ತಲುಪಿಲ್ಲ. ಸಂಬಂಧಿಕರು ಅಥವಾ ಸ್ನೇಹಿತರ ಮನೆಗೂ ಹೋಗಿಲ್ಲ ಎಂದು ಹೆತ್ತವರು ನಾಪತ್ತೆ ದೂರಿನಲ್ಲಿ ಉಲ್ಲೇಖಿಸಿದ್ದರು. ಮಿಸ್ಸಿಂಗ್ ಕೇಸ್ನಡಿ ಯುವತಿಯನ್ನು ಪತ್ತೆಹಚ್ಚುವ ಕೆಲಸದಲ್ಲಿ ತೊಡಗಿದ ಖಾಕಿ, ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿತು. ಸತತ ಹುಡುಕಾಟದ 8 ತಿಂಗಳ ನಂತರ ಯುವತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ.
ಈ ವಾರ ಪೊಲೀಸರು ಆಕೆಯ ಮೊಬೈಲ್ ಫೋನ್‌ಗೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಗಳನ್ನು ಕಲೆಹಾಕಿದಾಗ ಸುಳಿವು ದೊರೆತಿದೆ. ಆಕೆ ಕಣ್ಮರೆಯಾದ ಬಳಿಕ ಒಂದು ಪ್ರತ್ಯೇಕ ಸಮಯದಲ್ಲಿ ಮೊಬೈಲ್ ಫೋನ್ ಆಗಿರುವುದು ಟ್ರೇಸ್ ಆಗಿದೆ. ನಿರುಪಮಾ ಜತೆಗೆ ಬಿಸೋಯಿ ಪ್ರೇಮ ಸಂಬಂಧ ಹೊಂದಿದ್ದ ಎಂಬುದು ಸ್ಪಷ್ಟವಾದ ಬೆನ್ನಲ್ಲೇ ಆತನನ್ನು ಹುಡುಕಿದ ಪೊಲೀಸರು, ಕಡೆಗೂ ಆರೋಪಿಯ ಬಾಯಿಂದ ಸತ್ಯ ಕಕ್ಕಿಸಿದ್ದಾರೆ.
ಮೃತ ನಿರುಪಮಾ ತಂದೆ ಮತ್ತು ಸಹೋದರ ಆಕೆಯ ಅಸ್ಥಿಪಂಜರದ ಅವಶೇಷಗಳನ್ನು ಗುರುತಿಸಿದ್ದಾರೆ. ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ ತಂದೆ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ಅಪರಾಧದಲ್ಲಿ ಬಳಸಲಾದ ವಾಹನವನ್ನು ಸದ್ಯ ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ,(ಏಜೆನ್ಸೀಸ್).