ನ್ಯೂಸ್

ಮಸಾಲೆ ಪುಡಿಯಲ್ಲಿ ಅಡಗಿತ್ತು ಕೊಲೆ ಸಂಚು! ಪತಿ ಬೆನ್ನತ್ತಿದ ಪತ್ನಿಗೆ ಕಾದಿತ್ತು ಅಚ್ಚರಿ, ಕಡೆಗೂ ಗಂಡನ ಕರಾಳ ಮುಖ ಬಯಲು | Murder Case

ಮೋಹನ್​ ಶೆಟ್ಟಿ

Murder Case: ತನ್ನ ಮಡದಿಯ ಮೇಲಿನ ಕೋಪದಿಂದ, ಆಕೆ ಮತ್ತು ಅವಳ ಕುಟುಂಬವನ್ನು ನೇರವಾಗಿ ಯಮ ಲೋಕಕ್ಕೆ ಕಳಿಸಲು ಸಂಚು ಹೂಡಿದ ವ್ಯಕ್ತಿ, ಹೆಂಡತಿಯ ತಾಯಿಯನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾದ. ಆದ್ರೆ, ಉಳಿದವರು ಅದೃಷ್ಟವಶಾತ್ ಪಾರಾಗಿದ್ದೇ ಇಂದು ಆತನ ಬಂಧನಕ್ಕೆ ಕಾರಣವಾಗಿದೆ. ಜತೆಯಲ್ಲಿದ್ದ ಪತಿಯೇ ತನ್ನ ಕುಟುಂಬದವರ ಸಾವಿಗೆ ಸಂಚು ಹೂಡಿದ್ದ ಎಂಬ ಸಂಗತಿಯನ್ನು ಅರಿತ ಮಹಿಳೆ, ಇಂದು ತನ್ನ ತಾಯಿಯನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.

ಪತ್ನಿ ಮೇಲಿನ ದ್ವೇಷ

ಹೆಂಡತಿಯ ಜತೆ ಆಗಾಗ್ಗೆ ಜಗಳ ಮಾಡುತ್ತಿದ್ದ ಪತಿರಾಯ ಆಕೆಯನ್ನು ಹೇಗಾದರೂ ಮಾಡಿ ಹತ್ಯೆಗೈಯಲು ಹೂಡಿದ್ದ ಸಂಚು ಸಂಪೂರ್ಣವಾಗಿ ಈಡೇರಲಿಲ್ಲ. ಅಸಲಿಗೆ ಪತ್ನಿ ಮತ್ತು ಆಕೆಯ ಮನೆಯವರನ್ನು ಕೊಲ್ಲಬೇಕು ಎಂದು ಪ್ಲ್ಯಾನ್ ಮಾಡಿದ್ದ ಗಂಡ, ಅಡುಗೆಗೆ ಬಳಸುವ ಮಸಾಲೆ ಪುಡಿಯೊಳಗೆ ಮರ್ಕ್ಯೂರಿ ಮಿಶ್ರಣ ಮಾಡಿ, ಅದನ್ನು ಹೆಂಡತಿಯ ತಾಯಿ ಮನಗೆ ಕಳಿಸಿದ್ದ. ಇದನ್ನೇ ಬಳಸಿ, ಅಡುಗೆ ಮಾಡಿ ತಿಂದ ಕುಟುಂಬಸ್ಥರ ಪೈಕಿ ಮಹಿಳೆಯ ತಾಯಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರೆ, ಆಕೆಯ ಸಹೋದರ ಸಾವಿನ ದವಡೆಯಿಂದ ಪಾರಾಗಿದ್ದಾನೆ.

2 ವರ್ಷಗಳ ಹಿಂದೆ

ಮೊದಲಿಗೆ ತನ್ನ ತಾಯಿಯ ಸಾವಿಗೆ ಏನು ಕಾರಣ ಎಂಬುದನ್ನು ಅರಿಯದ ಮಹಿಳೆ, ನಂತರದಲ್ಲಿ ಪತಿಯನ್ನು ಶಂಕಿಸಿ, ಇದೆಲ್ಲವೂ ತನ್ನ ಗಂಡನಿಂದಾಗಿ ಸಂಭವಿಸಿರಬಹುದು, ಅಮ್ಮನ ಸಾವಿನಲ್ಲಿ ಈತನ ಕೈವಾಡವಿರಬಹುದು ಎಂಬುದನ್ನು ಶಂಕಿಸಿ, ದಿನ ಕಳೆದಂತೆ ಆತನ ನಡುವಳಿಕೆ, ಚಟುವಟಿಕೆಗಳಿಂದ ಸ್ಪಷ್ಟಪಡಿಸಿಕೊಂಡಿದ್ದಾಳೆ. ಇದರ ಬೆನ್ನಲ್ಲೇ ಆಕೆ ಪೊಲೀಸರಿಗೆ ಪತಿ ವಿರುದ್ಧ ದೂರು ದಾಖಲಿಸಿ, ತನಿಖೆ ಕೈಗೊಳ್ಳುವಂತೆ ತಿಳಿಸಿದಳು. 2 ವರ್ಷಗಳ ಹಿಂದೆ ಹೈದರಾಬಾದ್​ನ ಮಿಯಾಪುರದಲ್ಲಿ ಬೆಳಕಿಗೆ ಬಂದ ಈ ಪ್ರಕರಣದ ಆರೋಪಿಯನ್ನು ಈಗ ಬ್ರಿಟನ್‌ನಲ್ಲಿ ಬಂಧಿಸಲಾಗಿದೆ. ಈ ತಿಂಗಳ 17ರಂದು ಅಲ್ಲಿನ ಅಧಿಕಾರಿಗಳು ಇಂಟರ್‌ಪೋಲ್ ಸಹಾಯದಿಂದ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ವರದಿಯಾಗಿದೆ.

ಹತ್ಯೆಗೈಯಲು ಕಾರಣವೇನು?

ಅಜಿತ್ ಮತ್ತು ಸಿರಿಶಾ ವಿವಾಹಿತ ದಂಪತಿಗಳು. ಅವರಿಬ್ಬರೂ ಸ್ವಲ್ಪ ಸಮಯದವರೆಗೆ ಲಂಡನ್​ನಲ್ಲಿ ವಾಸಿಸುತ್ತಿದ್ದರು. ಈ ವೇಳೆ ಸಿರಿಶಾ ಯುಕೆಯಲ್ಲಿರುವ ತನ್ನ ಪತಿ ಅಜಿತ್ ಕುಮಾರ್‌ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಳು. ಇದರಿಂದ ಕೆರಳಿದ ಅಜಿತ್ ತನ್ನ ಪತ್ನಿ ಸಿರಿಶಾ ಮತ್ತು ಆಕೆಯ ಕುಟುಂಬದ ಮೇಲೆ ದ್ವೇಷ ಬೆಳೆಸಿಕೊಂಡಿದ್ದ. ಇದೇ ಕಾರಣದಿಂದಾಗಿ, ಹೆಂಡತಿಯ ಕುಟುಂಬದ ಸದಸ್ಯರನ್ನು ಮುಗಿಸಲು ಸಂಚು ಹೂಡಿದ್ದ. ಯಾರಿಗೂ ಅನುಮಾನ ಬಾರದಂತೆ ಕೊಲ್ಲಲು ಬಯಸಿದ ಕಿಡಿಗೇಡಿ. ಇದಕ್ಕಾಗಿ ತನ್ನ ಗ್ಯಾಂಗ್ ಸಹಾಯ ಪಡೆದು, ಅಡುಗೆಗೆ ಬಳಸುವ ಮಸಾಲೆ ಪುಡಿಯಲ್ಲಿ ಮರ್ಕ್ಯೂರಿ ಬೆರೆಸಿ ಹತ್ಯೆಗೈಯಲು ಯತ್ನಿಸಿದ್ದ.

ಮಸಾಲೆ ಪುಡಿಯೇ ಅಸ್ತ್ರ

ತನ್ನ ಹೆಂಡತಿಯ ಕುಟುಂಬಕ್ಕೆ ಕಳುಹಿಸಲಾದ ಮಸಾಲಾ ಪುಡಿಯಲ್ಲಿ ಕೆಮಿಕಲ್​ ಬೆರೆಸಿದ ಹಿನ್ನೆಲೆ ಸಿರಿಶಾಳ ತಾಯಿ ಉಮಾ ಮಹೇವ್ವರಿ 2023ರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಆದರೆ, ಸಿರಿಶಾಳ ಸಹೋದರ ಮಾತ್ರ ಸಾವಿನಿಂದ ಪಾರಾಗಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ, ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಸದ್ಯ ಬಂಧಿಸಿದ್ದಾರೆ. ಅಜಿತ್ (30) ಬ್ರಿಟನ್‌ಗೆ ಪರಾರಿಯಾಗಿದ್ದ. 2024ರ ಜ.17ರಂದು, ಅಲ್ಲಿನ ಅಧಿಕಾರಿಗಳು ಇಂಟರ್‌ಪೋಲ್ ಸಹಾಯದಿಂದ ಅಜಿತ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆದಾಗ್ಯೂ, ಸೈಬರಾಬಾದ್ ಪೊಲೀಸರು ಅಜಿತ್‌ನನ್ನು ಹೈದರಾಬಾದ್‌ಗೆ ಕರೆತರಲು ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ವರದಿ ತಿಳಿಸಿದೆ,(ಏಜೆನ್ಸೀಸ್).