ನ್ಯೂಸ್

ಸ್ವರ್ಗದಲ್ಲಿ ಆನಂದಿಸುತ್ತಿದ್ದೇನೆ; ಜೈಲಿನಿಂದ ಲೈವ್ ಬಂದ ಕೊಲೆ ಆರೋಪಿ

ನವದೆಹಲಿ: ಜೈಲು ಎಂದರೆ ಸಾಮಾನ್ಯವಾಗಿ ನಮ್ಮಗೆಲ್ಲಾ ನೆನಪಾಗುವುದು ಶಿಕ್ಷೆಗೆ ಒಳಪಟ್ಟವರು, ಪೊಲೀಸರ ಲಾಠಿ ಏಟು ಹಾಗೂ ರುಚಿಯಿಲ್ಲ ಊಟ ಸೇರಿದಂತೆ ನಾವು ಅನೇಕ ವಿಚಾರಗಳನ್ನು ಸಿನಿಮಾ ಹಾಗೂ ಸೀರಿಯಲ್​ಗಳಲ್ಲಿ ನೋಡಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಜೈಲುಗಳಲ್ಲಿ ಕೈದಿಗಳು ಮೊಬೈಲ್​ ಫೋನ್​ ಬಳಸುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿರುತ್ತವೆ.ಅದಕ್ಕೆ ಪೂರಕವೆಂಬೆಂತೆ ನಟೋರಿಯಸ್​ ರೌಡಿ ಒಬ್ಬ ಸ್ವರ್ಗವೆಂದು ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.

ಕೊಲೆ ಪ್ರಕರಣ ಒಂದರಲ್ಲಿ ಜೈಲು ಸೇರಿರುವ ಆರೋಪಿ ಉತ್ತರಪ್ರದೇಶದ ಸಾಮಾಜಿಕ ಜಾಲತಾಣದಲ್ಲಿ ಲೈವ್​ ಸ್ಟ್ರೀಮ್ ಮಾಡಿದ್ದಲ್ಲದೆ, ಜೈಲನ್ನು ಸ್ವರ್ಗವೆಂದು ಹೇಳಿದ್ದಾನೆ. ನಾನು ಇಲ್ಲಿ ಎಂಜಾಯ್ ಮಾಡುತ್ತಿದ್ದೇನೆ, ಇದು ಸ್ವರ್ಗ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ಬಳಿಕ ಹೆಚ್ಚಿನ ತನಿಖೆಗೆ ಆದೇಶಿಸಲಾಗಿದ್ದು, ಈ ಆರೋಪಿಯನ್ನು ಪ್ರಸ್ತುತ ಬರೇಲಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

2019 ರ ಡಿಸೆಂಬರ್ 2 ರಂದು ದೆಹಲಿಯ ಶಹಜಾನ್‌ಪುರದ ಸದರ್ ಬಜಾರ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಗುತ್ತಿಗೆದಾರ ರಾಕೇಶ್ ಯಾದವ್ (34) ಅವರನ್ನು ಹಾಡಹಗಲೇ ಗುಂಡಿಕ್ಕಿ ಕೊಂದ ಆರೋಪ ಆಸಿಫ್ಮೇ ಹಾಗೂ ರಾಹುಲ್​ ಚೌಧರಿ ಮೇಲಿದೆ. ಇಬ್ಬರೂ ಪ್ರಸ್ತುತ ಬರೇಲಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. ವಿಡಿಯೋ ವೈರಲ್​ ಆದ ಬಳಿಕ ರಾಕೇಶ್ ಯಾದವ್ ಅವರ ಸಹೋದರ ಬರೇಲಿ ಜಿಲ್ಲಾಧಿಕಾರಿ ಉಮೇಶ್ ಪ್ರತಾಪ್ ಸಿಂಗ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದರು.

ಆಸಿಫ್ ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ಪಡೆಯುತ್ತಿದ್ದಾನೆ ಎಂದು ದೂರುದಾರರು ಆರೋಪಿಸಿದ್ದು, ಇದಕ್ಕೆ ಸಹಕರಿಸುತ್ತಿರುವ ಅಧಿಕಾರಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕೆಂದು ಸಂತ್ರಸ್ತರ ಸಹೋದರ ಆಗ್ರಹಿಸಿದ್ದಾರೆ.