ಮುಂಬೈ: ಈ ಆಧುನಿಕ ಜೀವನದಲ್ಲಿ ಎಲ್ಲವು ಆನ್ಲೈನ್ಮಯವಾಗಿದೆ. ಏನೇ ಖರೀದಿ ಮಾಡಬೇಕೆಂದರೂ ಜನರು ಆನ್ಲೈನ್ ಮೊರೆ ಹೋಗುತ್ತಿದ್ದಾರೆ. ಮನೆಯಲ್ಲಿ ಅಡುಗೆ ಮಾಡುವುದು ಸಹ ಕೆಲವರಿಗೆ ವಿರಳವಾಗಿಬಿಟ್ಟಿದೆ. ಏಕೆಂದರೆ, ಆಹಾರವೂ ಕೂಡ ಇದೀಗ ಸುಲಭವಾಗಿ ಮನೆ ಬಾಗಿಲಿಗಿ ಬರುತ್ತಿದೆ. ಆದರೆ, ಈ ಆನ್ಲೈನ್ ಆಹಾರಗಳನ್ನು ತಿನ್ನುವಾಗ ತುಂಬಾ ಎಚ್ಚರಿಕೆಯನ್ನು ವಹಿಸಬೇಕು. ಇಲ್ಲವಾದಲ್ಲಿ ಏನಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ನಡೆದ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಕೋನ್ ಐಸ್ಕ್ರೀಮ್ನಲ್ಲಿ ಮಾನವನ ಬೆರಳನ್ನು ನೋಡಿ ಮಹಿಳೆಯೊಬ್ಬಳು ಶಾಕ್ ಆಗಿರುವ ಘಟನೆ ಮುಂಬೈನ ಮಲಾಡ್ ಏರಿಯಾದಲ್ಲಿ ನಡೆದಿದೆ. ಆಘಾತಕ್ಕೊಳಗಾದ ಮಹಿಳೆ ಮಲಾಡ್ ಪೊಲೀಸರನ್ನು ಸಂಪರ್ಕಿಸಿದ್ದು, ಐಸ್ ಕ್ರೀಮ್ ತಯಾರಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರು ದಾಖಲಿಸಿದ ಬಳಿಕ ಪೊಲೀಸರು, ಬೆರಳು ಯಾರದ್ದು? ಐಸ್ಕ್ರೀಮ್ ಕೋನ್ನಲ್ಲಿ ಹೇಗೆ ಬಂತು? ಎಂದು ತಿಳಿದುಕೊಳ್ಳಲು ಐಸ್ ಕ್ರೀಮ್ ಕೋನ್ ಮತ್ತು ಮಾನವ ಬೆರಳಿನ ಅಂಗವನ್ನು ವಿಧಿವಿಜ್ಞಾನ ತನಿಖೆಗೆ ಕಳುಹಿಸಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.
ಈ ಬಗ್ಗೆ ಮಾತನಾಡಿರುವ ಮಲಾಡ್ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಐಸ್ ಕ್ರೀಮ್ನಲ್ಲಿ ಪತ್ತೆಯಾದ ಮಾನವ ಅಂಗವನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದಿದ್ದಾರೆ. (ಏಜೆನ್ಸೀಸ್)