ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಗೆ ಬಾಂಬ್ ಬೆದರಿಕೆ ಬಂದಿದೆ. ಗುರುವಾರ (ನವೆಂಬರ್ 23) ಇಮೇಲ್ ಮೂಲಕ ಈ ಬೆದರಿಕೆ ಹಾಕಲಾಗಿದ್ದು, ಇದರಲ್ಲಿ 48 ಗಂಟೆಗಳ ಒಳಗೆ ಬಿಟ್‌ಕಾಯಿನ್ ಮೂಲಕ ಒಂದು ಮಿಲಿಯನ್ ಡಾಲರ್ ನೀಡುವಂತೆ ಬೇಡಿಕೆ ಇಡಲಾಗಿದೆ.
ಇಮೇಲ್ ಐಡಿ quaidacasrol@gmail.com ಬಳಸಿ ಬೆದರಿಕೆ ಮೇಲ್ ಕಳುಹಿಸಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ಸಹರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮುಂಬೈ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಇನ್‌ಬಾಕ್ಸ್‌ಗೆ ಈ ಇಮೇಲ್ ಕಳುಹಿಸಲಾಗಿದೆ.
ಇಮೇಲ್‌ನಲ್ಲಿ ಏನು ಬರೆಯಲಾಗಿದೆ?
ವಿಷಯಯದ ಜಾಗದಲ್ಲಿ- ಬ್ಲಾಸ್ಟ್ ಎಂದು ಬರೆದು, ಇದು ನಿಮ್ಮ ವಿಮಾನ ನಿಲ್ದಾಣಕ್ಕೆ ಕೊನೆಯ ಎಚ್ಚರಿಕೆಯಾಗಿದೆ. ಬಿಟ್‌ಕಾಯಿನ್‌ನಲ್ಲಿ $1 ಮಿಲಿಯನ್ ಅನ್ನು ನಾವು ಹೇಳಿರುವ ವಿಳಾಸಕ್ಕೆ ವರ್ಗಾಯಿಸದಿದ್ದರೆ, 48 ಗಂಟೆಗಳ ಒಳಗೆ ಟರ್ಮಿನಲ್ 2 ಅನ್ನು ಸ್ಫೋಟಿಸುತ್ತೇವೆ ಎಂದು ಇದೆ.
ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 385 ಮತ್ತು 505 (1) (b) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಐಪಿ ವಿಳಾಸವನ್ನು ಪತ್ತೆ ಹಚ್ಚಿದ್ದಾರೆ ಪೊಲೀಸರು
ಸದ್ಯ ವಿಮಾನ ನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ. ಇದರೊಂದಿಗೆ ಈ ಬೆದರಿಕೆ ಇಮೇಲ್ ಕಳುಹಿಸಿರುವ ಐಪಿ ವಿಳಾಸವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದೀಗ ಬೆದರಿಕೆ ಇಮೇಲ್ ಕಳುಹಿಸಿದ ವ್ಯಕ್ತಿಯನ್ನು ಗುರುತಿಸುವಲ್ಲಿ ಪೊಲೀಸರು ನಿರತರಾಗಿದ್ದಾರೆ. ಇದಕ್ಕೂ ಮೊದಲು ಮುಂಬೈ ಪೊಲೀಸರಿಗೆ ಹಲವು ಬೆದರಿಕೆ ಕರೆಗಳು ಬಂದಿವೆ.