ನ್ಯೂಸ್

ಬೈಕಿಗೆ ಡಿಕ್ಕಿ ಹೊಡೆದ ಆಡಳಿತ ಪಕ್ಷದ ನಾಯಕನ BMW ಕಾರು; ಅಪಘಾತದಲ್ಲಿ ಮಹಿಳೆ ಸಾವು.. ಸಿಎಂ ಹೇಳಿದ್ದೇನು?

ಮುಂಬೈ: ಮಹಾರಾಷ್ಟ್ರದ ವರ್ಲಿಯಲ್ಲಿ ಅತಿ ವೇಗವಾಗಿ ಬಂದ ಬಿಎಂಡಬ್ಲ್ಯು ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಅವಘಡದಲ್ಲಿ ಬೈಕ್​ನಲ್ಲಿದ್ದ ದಂಪತಿ ಗಂಭೀರ ಗಾಯಗೊಂಡಿದ್ದು, ಡಿಕ್ಕಿಯ ರಭಸಕ್ಕೆ ಮಹಿಳೆ ಮೃತಪಟ್ಟಿರುವ ಘಟನೆ ಭಾನುವಾರ (ಜುಲೈ 7) ಬೆಳಕಿಗೆ ಬಂದಿದೆ. ಈ ದಂಪತಿ ವರ್ಲಿಯ ಕೋಳಿವಾಡ ಪ್ರದೇಶದ ನಿವಾಸಿಗಳಾಗಿದ್ದು, ಸಾಸೂನ್ ಡಾಕ್‌ನಿಂದ ಮೀನು ತೆಗೆದುಕೊಂಡು ಮನೆಗೆ ಮರಳುತ್ತಿದ್ದರು ಎನ್ನಲಾಗಿದೆ.

ಬೆಳಗ್ಗೆ 5.30ರ ಸುಮಾರಿಗೆ ಏಟ್ರಿಯಾ ಮಾಲ್ ಬಳಿ ವೇಗವಾಗಿ ಬಂದ ಬಿಎಂಡಬ್ಲ್ಯು ಕಾರು ಇವರ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಪಲ್ಟಿಯಾಗಿ ಪತಿ-ಪತ್ನಿ ಇಬ್ಬರೂ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ. ತನ್ನನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಪತಿ ಬಾನೆಟ್‌ನಿಂದ ಜಿಗಿಯುವಲ್ಲಿ ಯಶಸ್ವಿಯಾದರು. ಆದರೆ ಆಕೆಯನ್ನು 100 ಮೀಟರ್ ದೂರ ಎಳೆದುಕೊಂಡು ಹೋಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಗಂಭೀರ ಗಾಯವಾಗಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ. ವರ್ಲಿ ಪೊಲೀಸರು ಬಿಎಂಡಬ್ಲ್ಯು ಕಾರನ್ನು ವಶಪಡಿಸಿಕೊಂಡಿದ್ದು ಪರಾರಿಯಾಗಿದ್ದ ಕಾರಿನ ಚಾಲಕನನ್ನು ಬಂಧಿಸಿದ್ದಾರೆ. ಕಾರಿನ ಮಾಲೀಕರು ಪಾಲ್ಘರ್‌ನ ಶಿವಸೇನೆಯ (ಶಿಂಧೆ) ಸ್ಥಳೀಯ ನಾಯಕ ರಾಜೇಶ್ ಷಾ ಎಂದು ಹೇಳಲಾಗಿದೆ. ಅಪಘಾತದ ವೇಳೆ ಚಾಲಕ ಮತ್ತು ರಾಜೇಶ್ ಷಾ ಅವರ ಪುತ್ರ ಕಾರಿನೊಳಗೆ ಇದ್ದರು ಎಂದು ಶಂಕಿಸಲಾಗಿದೆ.

ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ವರ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಹಿಳೆಯ ಪತಿಯನ್ನು ಭೇಟಿಯಾದರು. ಬಳಿಕ ಅವರು ಮುಂಬೈನ ಸಂಚಾರ ಶಿಸ್ತು ಮತ್ತು ಸುರಕ್ಷತೆಯನ್ನು ಮರಳಿ ತರಬೇಕಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ಅಪಘಾತವು ದುರದೃಷ್ಟಕರ ಮತ್ತು ದುಃಖಕರವಾಗಿದೆ. ಪೊಲೀಸರೊಂದಿಗೆ ಮಾತನಾಡಿದ್ದೇನೆ, ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನು ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಪೊಲೀಸರು ಯಾರನ್ನೂ ರಕ್ಷಿಸುವುದಿಲ್ಲ ಇದನ್ನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಅವರು ಶಿವಸೇನೆ ಕಾರ್ಯಕರ್ತನಾಗಿದ್ದರೂ, ಕಾನೂನಿನ ಮುಂದೆ ಎಲ್ಲರಿಗೂ ಸಮಾನ ನ್ಯಾಯ ನೀಡುವುದು ಸರ್ಕಾರದ ನಿಲುವು ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ. (ಏಜೆನ್ಸೀಸ್​​)