ನ್ಯೂಸ್

Mumbai rain: ಮುಂಬೈನಲ್ಲಿ ಭಾರೀ ಮಳೆ; ರಸ್ತೆ, ರೈಲು ಸಂಚಾರಕ್ಕೆ ಅಡಚಣೆ, ರೆಡ್ ಅಲರ್ಟ್‌ ಘೋಷಣೆ!

ಮುಂಬೈ (ಮಹಾರಾಷ್ಟ್ರ): ಭಾರತ ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರದಲ್ಲಿ ಬುಧವಾರ ಸಂಜೆಯಿಂದ ಭಾರೀ ಮಳೆ ಸುರಿಯುತ್ತಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್‌ ಘೋಷಣೆ ಮಾಡಿದೆ. ಮುಂಬೈ ಮಹಾ ನಗರದಲ್ಲಿ ಮಳೆಯ ಆರ್ಭಟ ಮಂದುವರೆದಿದ್ದು, ಎಡಬಿಡದೇ ಸುರಿಯುತ್ತಲೇ ಇದೆ.

ಈ ಮೊದಲು ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು, ಆದರೆ ಬದಲಾದ ಹವಾಮಾನ ಪರಿಸ್ಥಿತಿಯಿಂದಾಗಿ ಸಂಜೆ 5.30ಕ್ಕೆ ಹೊಸ ಪ್ರಕಟಣೆ ಹೊರಡಿಸಿದೆ. ಗುರುವಾರ ಬೆಳಿಗ್ಗೆ 8.30ರವರೆಗೂ ರೆಡ್ ಅಲರ್ಟ್ ಘೋಷಿಸಿದೆ. ಈ ಸಮಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಮಳೆಯಿಂದಾಗಿ ಮುಂಬೈಗೆ ಬರಬೇಕಿದ್ದ ಕೆಲ ವಿಮಾನಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ. ಸಂಚಾರ ದಟ್ಟಣೆ ಹೆಚ್ಚಾಗಿದೆ. ಮುಂಬೈ ಲೋಕಲ್ ರೈಲುಗಳ ವೇಳಾಪಟ್ಟಿಯೂ ಬದಲಾವಣೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಚಂಡಮಾರುತದ ಪರಿಚಲನೆಯು ಉತ್ತರ ಕೊಂಕಣ ಭಾಗದಿಂದ ಬಾಂಗ್ಲಾದೇಶ ದಕ್ಷಿಣ ಭಾಗದತ್ತ ಸಾಗುತ್ತಿದ್ದು, ಈ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕೊಂಕಣದ ಪೂರ್ಣ ಭಾಗ ಹಾಗೂ ಗೋವಾವನ್ನು ಈ ವಾರದೊಳಗೆ ಆವರಿಸಿಕೊಳ್ಳಲಿದೆ. ದಕ್ಷಿಣದತ್ತ ಮುಂದೆ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಸುಷ್ಮಾ ನಾಯರ್ ತಿಳಿಸಿದ್ದಾರೆ.

ಮುಂಬೈನ ಹಲವು ಉಪನಗರಗಳಲ್ಲಿ ಬುಧವಾರ ಮಧ್ಯಾಹ್ನದಿಂದ ಭಾರೀ ಮಳೆಯಾಗುತ್ತಿದೆ. ಮುಲುಂಡ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಸಂಜೆ 5:30 ಕ್ಕೆ ನೀಡಲಾದ ತನ್ನ ಇತ್ತೀಚಿನ ಎಚ್ಚರಿಕೆಯಲ್ಲಿ, ಮುಂಬೈ, ಥಾಣೆ, ರಾಯಗಡ ಮತ್ತು ರತ್ನಗಿರಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ ಭಾರಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ.