ನ್ಯೂಸ್

ಕರ್ಫ್ಯೂ ನಡುವೆಯೂ ಪ್ರೇಯಸಿಯನ್ನು ಭೇಟಿಯಾಗುತ್ತೇನೆ ಎಂದವನಿಗೆ ಮುಂಬೈ ಪೊಲೀಸ್ ಕೊಟ್ಟ ಉತ್ತರ ವೈರಲ್!

ಮುಂಬೈ: ಕರೊನಾ ಅಟ್ಟಹಾಸದಿಂದ ದೇಶದಲ್ಲಿ ಬಹುತೇಕ ಕಡೆ ಅಘೋಷಿತ ಲಾಕ್​ಡೌನ್ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮಹಾರಾಷ್ಟ್ರದಲ್ಲಂತೂ ವ್ಯಾಪಕವಾಗಿ ಕರೊನಾ ಹರಡುತ್ತಿರುವುದರಿಂದ ಮೇ 4ರವರೆಗೆ ಕರ್ಫ್ಯೂ ವಿಧಿಸಲಾಗಿದೆ.

ಕರ್ಫ್ಯೂ ವಿಧಿಸಿರುವುದರಿಂದ ಹಲವರಿಗೆ ಹಲವು ರೀತಿಯ ಫಜೀತಿ ತಂದೊಡ್ಡಿದೆ. ಹೀಗೆ ಕರ್ಫ್ಯೂ ಕಾರಣದಿಂದ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಭೇಟಿಯಾಗದೇ ಪರಿತಪಿಸುತ್ತಿದ್ದಾನೆ. ಸಹಾಯಕ್ಕೆ ಮುಂಬೈ ಪೊಲೀಸರ ಮೊರೆ ಹೋಗಿ ಕಡೆಗೆ ಅವರ ಕಡೆಯಿಂದ ಬುದ್ದಿ ಮಾತು ಹೇಳಿಸಿಕೊಂಡು ತೆಪ್ಪಗಿದ್ದಾನೆ.

ಅಶ್ವೀನ್ ವಿನೋದ್ ಎನ್ನುವ ಯುವಕ ಟ್ವಿಟ್ಟರ್​ನಲ್ಲಿ ಮುಂಬೈ ಪೊಲೀಸರಿಗೆ, ನಾನು ನನ್ನ ಪ್ರೇಯಸಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವಳನ್ನು ಭೇಟಿಯಾಗಬೇಕೆಂದರೆ ನಾನು ನನ್ನ ಬೈಕ್​​ಗೆ ಯಾವ ಸ್ಟಿಕರ್ ಬಳಸಿಕೊಂಡು ಹೋಗಬೇಕು ಎಂದು ಕೇಳಿದ್ದಾನೆ.

ಇದಕ್ಕೆ ಮುಂಬೈ ಪೊಲೀಸ್ ಟ್ವಿಟ್ಟರ್ ಹ್ಯಾಂಡಲ್ ಕೊಟ್ಟ ಉತ್ತರ ವೈರಲ್ ಆಗಿದೆ. ನೀವು ನಿಮ್ಮ ಪ್ರೇಯಸಿಯನ್ನು ಭೇಟಿಯಾಗಬೇಕು ಎಂಬುದು ನಿಮಗೆ ಅಗತ್ಯವಾದದ್ದಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಆದರೆ ದುರಾದೃಷ್ಟವಶಾತ್ ಇದು ನಮ್ಮ ಅಗತ್ಯ ಸೇವೆಗಳ ಅಡಿಯಲ್ಲಿ ಬರುವುದಿಲ್ಲ. ದೂರ ಇರುವಿಕೆಯ ಹೃದಯದ ಬೆಸುಗೆಯನ್ನು ಹತ್ತಿರಗೊಳಿಸುತ್ತದೆ. ಈ ಸಮಯದಲ್ಲಿ ನೀವು ಆರೋಗ್ಯದಿಂದ ಇರುವುದೇ ಲೇಸು. ನೀವು ಜೀವನಪೂರ್ತಿ ಚೆನ್ನಾಗಿರಬೇಕು. ಇದು ತಾತ್ಕಾಲಿಕ ಎಂದು ಮುಂಬೈ ಪೊಲೀಸ್ ಹೇಳಿದೆ. ಮುಂಬೈ ಪೊಲೀಸ್​ ಕೊಟ್ಟ ಈ ಉತ್ತರ ಸಕತ್ ವೈರಲ್ ಆಗಿದೆ.