ಮುಂಬೈ: ಎತ್ತರದ ಕಟ್ಟಡವೊಂದರ ಇಕ್ಕಟ್ಟಾದ ಸ್ಥಳದಲ್ಲಿ ಯುವಕನೊಬ್ಬ ಅಪಾಯಕಾರಿ ಸಾಹಸ ಪ್ರದರ್ಶನ ಮಾಡಿದ್ದ ವಿಡಿಯೋ ಇತ್ತೀಚೆಗಷ್ಟೇ ವೈರಲ್ ಆಗಿತ್ತು.
ಇದೀಗ ವಿಡಿಯೋ ಮುಂಬೈ ಪೊಲೀಸರ ಗಮನಕ್ಕೆ ಬಂದಿದ್ದು, ಸಾಹಸ ಪ್ರದರ್ಶಿಸಿದ ಯುವಕ ಮತ್ತು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ ಇಬ್ಬರು ಸ್ನೇಹಿತರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಯುವಕನೊಬ್ಬ ಎನರ್ಜಿ ಡ್ರಿಂಕ್ ಕುಡಿಯುತ್ತಾ 22 ಅಂತಸ್ತಿನ ಕಟ್ಟಡದಲ್ಲಿನ ಇಕ್ಕಟ್ಟಿನ ಜಾಗದಲ್ಲಿ ಕೈಯನ್ನು ನೆಲಕ್ಕೂರಿ ತನ್ನೆರಡು ಕಾಲ್ಗಳನ್ನು ಆಕಾಶಕ್ಕೆ ಚಾಚಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ್ದ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸ್ವಲ್ಪ ಮಿಸ್ ಆಗಿದ್ದರೂ ಯುವಕನ ಪ್ರಾಣ ಉಳಿಯುತ್ತಿರಲಿಲ್ಲ.
ವಿಡಿಯೋ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಎಚ್ಚರಿಕೆ ವಹಿಸಿರುವ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾಹಸ ಪ್ರದರ್ಶನ ಮಾಡಿದ ಕಟ್ಟಡವನ್ನು ಗುರುತಿಸಲಾಗಿದೆ. ಅದರ ಹೆಸರು ಜೈ ಭರತ್ ಕಟ್ಟಡವಾಗಿದೆ. ಮೂವರು ಯುವಕರನ್ನು ಪತ್ತೆ ಹಚ್ಚಲಾಗಿದೆ. ಸದ್ಯ ಅವರು ನಾಪತ್ತೆಯಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)