ಬೆಂಗಳೂರು: ಕರೊನಾ ವಿಚಾರದಲ್ಲಿ ಮುಂಬೈ ನಂಟಿನಿಂದ ಈಗಾಗಲೆ ನಲುಗಿರುವ ರಾಜ್ಯಕ್ಕೆ, ಜೂ.1ರ ನಂತರ ಮತ್ತೊಂದು ಅಘಾತ ಎದುರಾಗಲಿದೆ. ಸೇವಾ ಸಿಂಧು ಮೂಲಕ ನೋಂದಣಿಯಾಗಿ ದೆಹಲಿ, ಮುಂಬೈ, ಗುಜರಾತ್ ಇನ್ನಿತರ ನಗರಗಳಿಂದ ಸಾವಿರಾರು ಜನ ರಾಜ್ಯಕ್ಕಾಗಮಿಸಿದ್ದಾರೆ. ಈ ಪೈಕಿ ಮುಂಬೈನಿಂದ ಬಂದವರಲ್ಲೇ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ಇದೀಗ ಮುಂಬೈನಿಂದ ಜೂ.1ರಿಂದ ರೈಲು ಸೇವೆ ಆರಂಭಿಸಲಾಗುತ್ತಿದ್ದು, ಸೋಂಕಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ರಾಜ್ಯದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ 2,500ರ ಗಡಿಯಲ್ಲಿದೆ. 10 ದಿನಗಳಿಂದೀಚೆಗೆ 1 ಸಾವಿರಕ್ಕೂ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ 700ಕ್ಕೂ ಹೆಚ್ಚಿನವರು ಮುಂಬೈನಿಂದ ಬಂದವರಾಗಿದ್ದಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 1 ಸಾವಿರ ದಾಟುವ ಅಂದಾಜಿದೆ.
ಪ್ರತಿನಿತ್ಯ 2 ಸಾವಿರ ಜನ
ದೇಶದಲ್ಲೇ ಮಹಾರಾಷ್ಟ್ರದಲ್ಲಿ ಅದರಲ್ಲೂ ಮುಂಬೈನಲ್ಲಿ ಅತಿಹೆಚ್ಚು ಕರೊನಾ ಪ್ರಕರಣಗಳಿವೆ. ಹೀಗಾಗಿ ಮುಂಬೈನಿಂದ ಬರುವ ಬಹುತೇಕರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮುಂಬೈ ಸೇರಿ ಹೊರರಾಜ್ಯದಿಂದ ಬರುವ ಪ್ರತಿಯೊಬ್ಬರ ಮೇಲೂ ನಿಗಾ ವಹಿಸಲಾಗುತ್ತಿದೆ. ಇದೀಗ, ಬೆಂಗಳೂರು ನಗರ ಕೆಎಸ್ಆರ್ ರೈಲು ನಿಲ್ದಾಣ ಮತ್ತು ಗದಗಕ್ಕೆ ಮುಂಬೈನಿಂದ ರೈಲು ಸೇವೆ ನೀಡಲಾಗುತ್ತಿದೆ. ಈ ಎರಡೂ ರೈಲುಗಳಿಂದ ಪ್ರತಿನಿತ್ಯ 2 ಸಾವಿರಕ್ಕೂ ಹೆಚ್ಚಿನ ಜನರು ರಾಜ್ಯದೊಳಗೆ ಬರಲಿದ್ದಾರೆ.
ಕ್ವಾರಂಟೈನ್ ಸಮಸ್ಯೆ
ಮುಂಬೈ ಜತೆಗೆ ದೆಹಲಿಯ ನಿಜಾಮುದ್ದೀನ್, ಗೋವಾದ ವಾಸ್ಕೋ ಡ ಗಾಮ, ಕೊಲ್ಕತಾದ ಹೌರಾ ಹಾಗೂ ಉತ್ತರ ಪ್ರದೇಶದ ದಾನಪುರಕ್ಕೆ ರೈಲು ಸೇವೆ ನೀಡಲಾಗುತ್ತಿದೆ. ಇಲ್ಲಿಂದ ಪ್ರತಿದಿನ 5 ಸಾವಿರಕ್ಕೂ ಹೆಚ್ಚಿನ ಜನರು ರಾಜ್ಯಕ್ಕೆ ಬರಲಿದ್ದಾರೆ. ನಿತ್ಯ ವಿಮಾನಗಳ ಮೂಲಕ 4 ಸಾವಿರಕ್ಕೂ ಹೆಚ್ಚಿನ ಜನರು ಹೊರ ರಾಜ್ಯಗಳಿಂದ ಆಗಮಿಸುತ್ತಿದ್ದಾರೆ. ಹೀಗೆ ನಿತ್ಯ 9 ಸಾವಿರಕ್ಕೂ ಹೆಚ್ಚಿನ ಜನ ರಾಜ್ಯಕ್ಕೆ ಆಗಮಿಸಿದರೆ ಅವರನ್ನೆಲ್ಲ ಕ್ವಾರಂಟೈನ್ಗೆ ಒಳಪಡಿಸುವುದಕ್ಕೆ ಹರಸಾಹಸ ಪಡಬೇಕಿದೆ. ಪ್ರಮುಖವಾಗಿ ಜಾಗದ ಕೊರತೆ ಎದುರಾಗಲಿದೆ. ಇದಕ್ಕೆ ಪರಿಹಾರ ಎನ್ನುವಂತೆ ರೋಗಲಕ್ಷಣ ಇಲ್ಲದವರನ್ನು ಹೋಂ ಕ್ವಾರಂಟೈನ್ ಮಾಡುತ್ತೇವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಹೋಂ ಕ್ವಾರಂಟೈನ್ನಲ್ಲಿ ಇಟ್ಟರೂ ನಿಗಾ ವಹಿಸುವುದಕ್ಕೂ ಸಾಕಷ್ಟು ಶ್ರಮ ಪಡಬೇಕಿದೆ.
ಇದನ್ನೂ ಓದಿ ಜೇವರ್ಗಿ ಕ್ವಾರಂಟೈನ್ನಲ್ಲಿ 14 ಜನರಿಗೆ ವೈರಸ್
ಆನ್ಲೈನ್ ಬುಕ್ಕಿಂಗ್ ಆರಂಭ
ಜೂ.1ರಿಂದ 16 ಮಾರ್ಗಗಳಲ್ಲಿ ಕಾರ್ಯಾರಂಭ ಮಾಡಲಿರುವ ವೇಳಾಪಟ್ಟಿಯನ್ನು ನೈಋತ್ಯ ರೈಲ್ವೆ ಪ್ರಕಟಿಸಿದೆ. ಗುರುವಾರದಿಂದಲೇ ಟಿಕೆಟ್ ಮುಂಗಡ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೆ ಬಹುತೇಕ ಟಿಕೆಟ್ಗಳು ಮಾರಾಟವಾಗಿದೆ.
ಸಮುದಾಯಕ್ಕೆ ಹರಡುವ ಭೀತಿ
ಸದ್ಯ ರಾಜ್ಯದಲ್ಲಿ ಕರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿಲ್ಲ. ಬದಲಿಗೆ ರೋಗಿ ಮತ್ತು ಆತನ ಪ್ರಾಥಮಿಕ ಸಂಪರ್ಕದಲ್ಲಿ ಇರುವವರಲ್ಲಷ್ಟೇ ಕಾಣಿಸಿಕೊಳ್ಳುತ್ತಿದೆ. ಒಂದೊಮ್ಮೆ ಹೋಂ ಕ್ವಾರಂಟೈನ್ನಲ್ಲಿ ಇರುವವರಲ್ಲಿ ಸೋಂಕು ಕಾಣಿಸಿಕೊಂಡು, ಅವರ ಮೇಲೆ ನಿಗಾವಹಿಸದಿದ್ದರೆ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆಗಳಿರುತ್ತದೆ. ಹಾಗೇನಾದರೂ ಆದರೆ ರಾಜ್ಯ ಕರೊನಾ ಸೋಂಕಿನ ಹಾಟ್ಸ್ಪಾಟ್ ಆಗಿ ಪರಿವರ್ತನೆಯಾಗಲಿದೆ.