ನವದೆಹಲಿ: ಮುಂಬೈನಿಂದ ಫ್ರಾಂಕ್‌ಫರ್ಟ್‌ಗೆ ಹೊರಟಿದ್ದ ವಿಸ್ತಾರಾ ಏರ್ಲೈನ್ಸ್ ಯುಕೆ 27 ವಿಮಾನವು ಮಧ್ಯದಲ್ಲಿ ಮಾರ್ಗ ಬದಲಿಸಬೇಕಾಯಿತು. ವಿಮಾನವನ್ನು ಟರ್ಕಿಯಲ್ಲಿ ಇಳಿಸಲಾಯಿತು.
ಭದ್ರತಾ ಕಾರಣಗಳಿಗಾಗಿ ವಿಮಾನವನ್ನು ಫ್ರಾಂಕ್‌ಫರ್ಟ್‌ಗೆ ಬದಲಾಗಿ ಟರ್ಕಿಗೆ ತಿರುಗಿಸಬೇಕಾಯಿತು ಎಂದು ವಿಸ್ತಾರಾ ಕಂಪನಿಯು ತನ್ನ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ. ವಿಮಾನವು ಭಾರತೀಯ ಕಾಲಮಾನ ರಾತ್ರಿ 7.05ಕ್ಕೆ ಟರ್ಕಿಯ ಎರ್ಜುರಮ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.
ಮುಂಬೈನಿಂದ ಹೊರಟ ಈ ವಿಮಾನದಲ್ಲಿ ಭದ್ರತಾ ಲೋಪಗಳಿದ್ದವು ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಎಟಿಸಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ನಂತರ ಅವರ ಸಲಹೆಯಂತೆ ವಿಮಾನವನ್ನು ಟರ್ಕಿಯಲ್ಲಿ ಇಳಿಸಲಾಯಿತು ಎಂದು ತಿಳಿದುಬಂದಿದೆ.