ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದು ಮಹಿಳೆಯೊಬ್ಬಳು ಹೈಡ್ರಾಮಾ ಸೃಷ್ಟಿಸಿದ ಘಟನೆ ನಡೆದಿದೆ.
ಕಳೆದ ಸೋಮವಾರ ದಕ್ಷಿಣ ಮುಂಬೈನ 40 ವರ್ಷದ ಗೃಹಿಣಿಯೊಬ್ಬಳು, ಮುಂಬೈ-ಕೋಲ್ಕತ್ತಾ ವಿಮಾನದ ಚೆಕ್-ಇನ್ ಕೌಂಟರ್ ತಲುಪಿದ ನಂತರ ಏರ್ಪೋರ್ಟ್ ಸಿಬ್ಬಂದಿಗೆ ಬೋರ್ಡಿಂಗ್ ಪಾಸ್ ಜತೆಗೆ ಎರಡು ಬ್ಯಾಗ್ಗಳನ್ನು ನೀಡಿದ್ದಾಳೆ.
ಏರ್‌ಲೈನ್‌ನ ನಿಯಮಗಳ ಪ್ರಕಾರ, ಪ್ರಯಾಣಿಕನು ತನ್ನ ಜತೆಗೆ ಗರಿಷ್ಠ 15 ಕೆಜಿ ತೂಕದ ಒಂದು ಬ್ಯಾಗ್ ಮಾತ್ರ ತನ್ನೊಂದಿಗೆ ಉಚಿತವಾಗಿ ಒಯ್ಯಬಹುದಾಗಿದೆ.
ಆದರೆ ಈ ವೇಳೆ ಮಹಿಳೆಯ ಬ್ಯಾಗ್ 22.ಕೆಜಿ ಇದ್ದ ಕಾರಣ ಏರ್ಪೋರ್ಟ್ ಸಿಬ್ಬಂದಿ ಹೆಚ್ಚುವರಿ ತೂಕಕ್ಕೆ ಹಣ ಪಾವತಿಸುವಂತೆ ಹೇಳಿದ್ದಾರೆ. ಆದರೆ ಇದಕ್ಕೆ ನಿರಾಕರಿಸಿದ ಮಹಿಳೆಯು, ಸಿಬ್ಬಂದಿಯೊಡನೆ ವಾಗ್ವಾದಕ್ಕೆ ಇಳಿದು ತನ್ನ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದಿದ್ದಾಳೆ. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿ ಇತರ ಪ್ರಯಾಣಿಕರಿಗೂ ಗಾಬರಿಯನ್ನುಂಟು ಮಾಡಿತು.
ಕೂಡಲೇ ಕರ್ತವ್ಯನಿರತ ಭದ್ರತಾ ಪಡೆ ಸಿಬ್ಬಂದಿ ಆಕೆಯ ಬ್ಯಾಗ್ನ್ನು ಪರಿಶೀಲಿಸಿದ್ದು, ಅದರಲ್ಲಿ ಅನುಮಾನಾಸ್ಪದವಾಗಿ ಯಾವ ವಸ್ತುಗಳು ಕಂಡುಬಂದಿಲ್ಲ. ನಂತರ ಮಹಿಳೆಯನ್ನು ಸಹಾರ್ ಪೊಲೀಸರಿಗೆ ಹಸ್ತಾಂತರಿಸಿ ಆಕೆಯ ವಿರುದ್ಧ ಜೀವ ಮತ್ತು ಇತರರ ಸುರಕ್ಷತೆಗೆ ಧಕ್ಕೆ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಿದ್ದು, ಗೌಪ್ಯತೆಯ ಕಾರಣದಿಂದಾಗಿ ಪೊಲೀಸರು ಮಹಿಳೆಯ ಗುರುತನ್ನು ಬಿಡುಗಡೆ ಮಾಡಿಲ್ಲ.(ಏಜೆನ್ಸೀಸ್)