ನ್ಯೂಸ್

ಗೋಲ್ಡ್ ಸ್ಕೀಂ ವಂಚನೆ: ಶಿಲ್ಪಾಶೆಟ್ಟಿ, ಪತಿ ರಾಜ್​ಕುಂದ್ರಾ ವಿರುದ್ಧ ತನಿಖೆಗೆ ಮುಂಬೈ ಕೋರ್ಟ್‌ ಆದೇಶ

ಮುಂಬೈ: ಹಣ ಹೂಡಿಕೆ ಮಾಡಿ ಚಿನ್ನ ಪಡೆಯುವ ಯೋಜನೆಯಲ್ಲಿ ವಂಚನೆ ಮಾಡಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್‌ ಕುಂದ್ರಾ ಹಾಗೂ ಇತರ ಮೂವರ ವಿರುದ್ಧ ತನಿಖೆ ನಡೆಸುವಂತೆ ಸ್ಥಳೀಯ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.

ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಆರೋಪ ಕಾಣಿಸುತ್ತಿದೆ. ಈ ಕುರಿತು ತನಿಖೆ ಮಾಡಬೇಕು ಎಂದು ಕೋರ್ಟ್‌ ಹೇಳಿದೆ.

ಪೃಥ್ವಿರಾಜ್‌ ಕೊಠಾರಿ ಎಂಬುವರು 2019ರಲ್ಲಿ ಶಿಲ್ಪಾ ಶೆಟ್ಟಿ ಅವರ ಕಂಪನಿಯಲ್ಲಿ 90 ಲಕ್ಷ ರೂ. ಹೂಡಿಕೆ ಮಾಡಿದ್ದರು. ಆದರೆ ಇದರ ಅವಧಿ ಪೂರ್ಣಗೊಂಡ ಬಳಿಕ ಹಣದ ಮೌಲ್ಯದಷ್ಟು ಚಿನ್ನವನ್ನು ಶಿಲ್ಪಾ ಶೆಟ್ಟಿ ಅವರ ಕಂಪನಿ ನೀಡಲಿಲ್ಲ. ಇದು ವಂಚಿಸಿದೆ ಎಂದು ಪ್ರಕರಣ ದಾಖಲಿಸಿದ್ದರು.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎನ್‌.ಪಿ. ಮೆಹ್ತಾ ಅವರು ಮಂಗಳವಾರ ಹೊರಡಿಸಿದ ಆದೇಶದಲ್ಲಿ, ಕುಂದ್ರಾ ದಂಪತಿ ಮಾಲೀಕತ್ವದ ಸತ್ಯುಗ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್, ಅದರ ಇಬ್ಬರು ನಿರ್ದೇಶಕರು ಮತ್ತು ಉದ್ಯೋಗಿಗಳು ವಂಚನೆ ಎಸಗಿರುವುದು "ಪ್ರಾಥಮಿಕ ತನಿಖೆಯಿಂದ ದೃಢವಾಗಿದೆ". ಹೀಗಾಗಿ ರಿದ್ಧಿ ಸಿದ್ಧಿ ಬುಲಿಯನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪೃಥ್ವಿರಾಜ್ ಕೊಠಾರಿ ಅವರು ಸಲ್ಲಿಸಿರುವ ದೂರಿನ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯವು ಬಿಕೆಸಿ ಪೊಲೀಸ್ ಠಾಣೆಗೆ ಸೂಚಿಸಿದೆ.

ವಂಚನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಧೀಶರು ಪೊಲೀಸರಿಗೆ ಸೂಚಿಸಿದ್ದಾರೆ.