ನ್ಯೂಸ್

ಕಂಗನಾ ವಿರುದ್ಧ ಬೇಲಬಲ್ ವಾರಂಟ್... ಮಾತೇ ಮುಳುವಾಯಿತೇ ?!

ಮುಂಬೈ: ಚಲನಚಿತ್ರ ಗೀತರಚನಾಕಾರ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಜಾವೇದ್ ಅಖ್ತರ್ ದಾಖಲಿಸಿರುವ ಮಾನಹಾನಿ ಮೊಕದ್ದಮೆಯ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಮುಂಬೈ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದೆ. ಪ್ರಕರಣದ ವಿಚಾರಣೆಯಲ್ಲಿ ಭಾಗವಹಿಸಲು ನ್ಯಾಯಾಲಯ ಸಮನ್ಸ್ ನೀಡಿದ್ದರೂ ಸಹ ಸೋಮವಾರ ನ್ಯಾಯಾಲಯದ ಮುಂದೆ ಹಾಜರಾಗದ ಕಂಗನಾರ ವಿರುದ್ಧ ಮ್ಯಾಜಿಸ್ಟ್ರೇಟರು ಬೇಲಬಲ್ ವಾರೆಂಟ್​ಜಾರಿ ಮಾಡಿದ್ದಾರೆ.

ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್​ ಸಾವಿಗೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿಯಲ್ಲಿ ನಡೆದ ಸಂದರ್ಶನವೊಂದರಲ್ಲಿ ವಿನಾ ಕಾರಣ ತಮ್ಮ ಹೆಸರನ್ನು ಎತ್ತಾಡಿ, ತಮ್ಮ ಮಾನಹಾನಿ ಮಾಡಿದ್ದಾಗಿ ಜಾವೆದ್ ಅಖ್ತರ್ ನವೆಂಬರ್​ 2020 ರಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಜುಹು ಪೊಲೀಸರ ಪ್ರಾಥಮಿಕ ವರದಿಯನ್ನು ಪರಿಗಣಿಸಿ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಂಗನಾಗೆ ಸಮನ್ಸ್ ಜಾರಿ ಮಾಡಿತ್ತು.

ಫೆಬ್ರವರಿ 1 ರಂದು ಜಾರಿಯಾದ ಈ ಸಮನ್ಸ್ ಪ್ರಕಾರ ಕಂಗನಾ ಇಂದು ನ್ಯಾಯಾಲಯದಲ್ಲಿ ಹಾಜರಾಗಬೇಕಿತ್ತು. ಆದರೆ ವಿಚಾರಣೆ ಆರಂಭವಾದಾಗ, ಕಂಗನಾ ರಣಾವತ್ ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ಹಾಜರಾಗದಿರುವುದಕ್ಕೆ ವಿನಾಯಿತಿ ಕೋರಿ ಯಾವುದೇ ಅರ್ಜಿ ಕೂಡ ಸಲ್ಲಿಸಿರಲಿಲ್ಲ.

ಜಾವೆದ್​ ಅಖ್ತರ್ ಪರ ವಕೀಲರಾದ ವೃಂದ ಗ್ರೋವರ್, ಕೋರ್ಟ್ ಸಮನ್ಸ್​ ಜಾರಿಯಾಗಿರುವ ಬಗ್ಗೆ ಮಾಧ್ಯಮದಲ್ಲಿ ಬಂದ ಟ್ವೀಟ್​ ಒಂದಕ್ಕೆ ಕಂಗನಾ ರೀಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿರುವುದನ್ನು ತೋರಿಸಿದರು. ಕಂಗನಾಗೆ ಸಮನ್ಸ್ ಬಗ್ಗೆ ಅರಿವಿದ್ದೂ, ನ್ಯಾಯಾಲಯದ ಮುಂದೆ ಹಾಜರಾಗಿಲ್ಲ. ಹಾಗಾಗಿ ಮುಂದಿನ ವಿಚಾರಣಾ ದಿನಾಂಕದಂದು ಅವರು ಹಾಜರಾಗುವಂತೆ ಬೇಲಬಲ್ ವಾರಂಟ್ಅನ್ನು ಜಾರಿಗೊಳಿಸಬೇಕೆಂದು ಕೋರಿದರು.

ಕಂಗನಾ ವಕೀಲರು ಸಮನ್ಸ್ ಜಾರಿಗೊಳಿಸಿದ ಆದೇಶದ ವಿರುದ್ಧ ಕಂಗನಾ ಅಪೀಲ್​ ಸಲ್ಲಿಸಲಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದಾಗ, ಮ್ಯಾಜಿಸ್ಟ್ರೇಟರಾದ ಆರ್.ಆರ್.ಖಾನ್, "ನೀವು ಮೇಲ್ಮನವಿ ಸಲ್ಲಿಸಬಹುದು. ಆದರೆ ಅದು ನೀವು ಇಲ್ಲಿ ಹಾಜರಾಗುವುದಕ್ಕೆ ವಿನಾಯಿತಿ ಕೊಡುವುದಿಲ್ಲ" ಎಂದರು. ಮಾರ್ಚ್​ 22 ರೊಳಗೆ ಕ್ರಮ ತೆಗೆದುಕೊಳ್ಳಬೇಕಾದ ಜಾಮೀನುಸಹಿತ ವಾರಂಟ್ಅನ್ನು ಮ್ಯಾಜಿಸ್ಟ್ರೇಟರು ಜಾರಿಗೊಳಿಸಿದರು.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ