Muda case: ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮುಡಾ ಆಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಇಡಿ ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ಸಿದ್ದರಾಮಯ್ಯ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಸಚಿನ್ vs ಸಂಗಕ್ಕಾರ; ಅಂತರರಾಷ್ಟ್ರೀಯ ಮಾಸ್ಟರ್ಸ್ ಲೀಗ್ನ ಉದ್ಘಾಟನಾ ಪಂದ್ಯದಲ್ಲಿ ದಿಗ್ಗಜ ಕ್ರಿಕೆಟಿಗರು ಮುಖಾಮುಖಿ
''2021ರ ಮಾರ್ಚ್ 20 ರಂದು ಮುಡಾದಲ್ಲಿ ನಡೆದ ಸಭೆಯನ್ನು ಶ್ರೀಮತಿ ಪಾರ್ವತಿ, W/O ಶ್ರೀ ಸಿದ್ದರಾಮಯ್ಯ ಅವರಿಗೆ ಪರ್ಯಾಯ ಸೈಟ್‌ಗಳನ್ನು ಮಂಜೂರು ಮಾಡುವ ಏಕೈಕ ಉದ್ದೇಶದಿಂದ ಕರೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಆಗಿನ ಮುಡಾ ಆಯುಕ್ತ ನಟೇಶ್ ಅವರು ಪಾರ್ವತಿ ಅವರಿಗೆ ಹಂಚಿಕೆ ಮಾಡಬೇಕಾದ ಪರಿಹಾರದ ನಿವೇಶನಗಳನ್ನು ಖುದ್ದಾಗಿ ಗುರುತಿಸಿದ್ದಾರೆ'' ಎಂದು ತಮ್ಮ ಎಕ್ಸ್(ಈ ಹಿಂದಿನ ಟ್ವೀಟರ್) ಖಾತೆಯಲ್ಲಿ ಯತ್ನಾಳ್ ಹಂಚಿಕೊಂಡಿದ್ದಾರೆ.
ನಿಯಮಗಳ ಪ್ರಕಾರ, ಪರಿಹಾರದ ಸೈಟ್‌ಗಳನ್ನು ಲಾಟರಿ ಆಧಾರದ ಮೇಲೆ ಹಂಚಬೇಕು. ಆದಾಗ್ಯೂ, ದೇವನೂರು ವಿಸ್ತರಣೆಯಲ್ಲಿ 352 ಸೈಟ್‌ಗಳು ಲಭ್ಯವಿದ್ದಾಗಲೂ, ಹೆಚ್ಚಿನ ರಿಯಲ್ ಎಸ್ಟೇಟ್ ಮೌಲ್ಯವನ್ನು ಹೊಂದಿರುವ ಪ್ರಮುಖ ಸ್ಥಳವಾದ ವಿಜಯನಗರದಲ್ಲಿ ಸೈಟ್‌ಗಳನ್ನು ಹಂಚಲಾಯಿತು. ಜಾರಿ ನಿರ್ದೇಶನಾಲಯವು ತನ್ನ ತಾತ್ಕಾಲಿಕ ಲಗತ್ತು ಆದೇಶದಲ್ಲಿ (PAO) ಮಾಡಿದ ಅವಲೋಕನಗಳು ಎಂದು ಉಲ್ಲೇಖಿಸಿರು ಯತ್ನಾಳ್, ಸಿಎಂ ಸಿದ್ದರಾಮಯ್ಯನರೇ, ಪ್ರಾಥಮಿಕ ದೃಷ್ಟಿಯಲ್ಲಿ ಜಾರಿ ನಿರ್ದೇಶನಾಲಯವು ಬಲವಾದ ಪ್ರಕರಣವನ್ನು ಸ್ಥಾಪಿಸಿರುವುದರಿಂದ ನೈತಿಕ ಆಧಾರದ ಮೇಲೆ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.