ನ್ಯೂಸ್

Muda Case | ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

ಬೆಂಗಳೂರು: ಹೈಕೋರ್ಟ್ ಮತ್ತು ಜನಪ್ರತಿನಿಧಿ ನ್ಯಾಯಾಲಯ ಆದೇಶಗಳ ಹಿನ್ನೆಲೆಯಲ್ಲಿ ಮೂಡ ಹಗರಣದಲ್ಲಿ Muda Case ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಒತ್ತಾಯ ಮಾಡಿದೆ.

ಅಲ್ಲದೆ, ಸಿಎಂ ರಾಜೀನಾಮೆಗೆ ಒತ್ತಾಯ ಮಾಡಿ ಜೆಡಿಎಸ್ ಕಾರ್ಯಕರ್ತರು ಪಕ್ಷದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ರಾಜ್ಯಪಾಲರು ನೀಡಿರುವ ಅನುಮತಿಗೆ ರಾಜ್ಯ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಅಲ್ಲದೆ, ಜನ ಪ್ರತಿನಿಧಿ ನ್ಯಾಯಾಲಯ ಸಿಎಂ ವಿರುದ್ಧ ಎಫ್​ಐಆರ್ ದಾಖಲಿಸಿ, ಮೂರು ತಿಂಗಳ ಒಳಗಾಗಿ ತನಿಖೆ ಮುಗಿಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ರಮೇಶ್ ಗೌಡ ಒತ್ತಾಯ ಮಾಡಿದರು.

ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟ Muda Case

ಊರಿಗೆಲ್ಲ ನೈತಿಕತೆಯ ಪಾಠ ಮಾಡುವ ಸಿದ್ದರಾಮಯ್ಯ ಅವರು ಈಗಲಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದ ಅವರು, ರಾಜೀನಾಮೆ ಕೊಡದಿದ್ದರೆ ಜೆಡಿಎಸ್ ನಿರಂತರವಾಗಿ ಉಗ್ರ ಹೋರಾಟ ನಡೆಸುತ್ತದೆ ಎಂದು ಎಚ್ಚರಿಕೆ ನೀಡಿದರು. ಅಧಿಕಾರ ದುರ್ಬಳಕೆ: ಮುಡಾದಲ್ಲಿ ನಿವೇಶನಗಳನ್ನು ಕಬಳಿಸಲು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ನ್ಯಾಯಾಲಯಗಳ ಆದೇಶ ಕೂಡ ಸ್ಪಷ್ಟವಾಗಿದೆ. ತಮ್ಮ ಕುಟುಂಬಕ್ಕೆ ಅನುಕೂಲ ಮಾಡಿಕೊಳ್ಳಲು ಸಿಎಂ ಅವರು ಅಧಿಕಾರ ದುರ್ಬಳಕೆ ಜತೆಗೆ ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ. ಹೀಗಾಗಿ ಒಂದು ಕ್ಷಣವೂ ಅವರು ಅಧಿಕಾರದಲ್ಲಿ ಮುಂದುವರಿದೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ತಮ್ಮ ಪತ್ನಿ ಅವರಿಗೆ ಅನುಕೂಲ ಆಗುವಂತೆ ನಿರ್ಧಾರ ತೆಗೆದುಕೊಳ್ಳುವ ಪ್ರತಿ ಸಲವೂ ಸಿದ್ದರಾಮಯ್ಯ ಅವರು ಪ್ರಭಾವಿ ಹುದ್ದೆಯಲ್ಲಿ ಇದ್ದರು. ಈ ಪ್ರಭಾವದಿಂದ ಅವರು ತಮ್ಮ ಪತ್ನಿ ಅವರಿಗೆ ಕೇವಲ ಎರಡು ನಿವೇಶನಗಳು ದೊರೆಯುಬೇಕಿದ್ದ ಬದಲಿಗೆ 14 ನಿವೇಶನಗಳು ಸಿಕ್ಕಿವೆ. ಇದನ್ನೇ ನ್ಯಾಯಾಲಯ ಗಮನಿಸಿದೆ. ಇನ್ನಾದರೂ ಅವರು ಪದತ್ಯಾಗ ಮಾಡಬೇಕು ಎಂದು ಆಗ್ರಹ ಮಾಡಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ

ಅಕ್ರಮ ಮುಡಾ ಸೈಟ್‌ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್ ದಾಖಲಿಸಲು ಕೋರ್ಟ್ ಆದೇಶ ನೀಡಿದೆ. 82ನೇ ಸಿಸಿಹೆಚ್ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಈ ಮಹತ್ವದ ಸೂಚನೆ ನೀಡಿದ್ದಾರೆ. ಮೈಸೂರು ಲೋಕಾಯುಕ್ತಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಿಸಲು ಕೋರ್ಟ್‌ ನಿರ್ದೇಶನ ನೀಡಿದೆ.

CRPC ಸೆಕ್ಷನ್ 156(3) ಅಡಿ ಕೇಸ್‌ ರಿಜಿಸ್ಟರ್ ಮಾಡಲು ಆದೇಶ ನೀಡಲಾಗಿದ್ದು, ತನಿಖಾ ವರದಿ ನೀಡಲು 3 ತಿಂಗಳ ಗಡುವು ನೀಡಲಾಗಿದೆ. ಅಂದ್ರೆ ಡಿಸೆಂಬರ್ 24 2024ಕ್ಕೆ ತನಿಖಾ ವರದಿ ನೀಡಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಸೂಚನೆ ನೀಡಿದೆ.