ನ್ಯೂಸ್

ಅಮೆರಿಕಾ ಜನರಿಗೆ 'ಕ್ಯಾಪ್ಟನ್ ಕೂಲ್'​ ದರ್ಶನ! ಸ್ನೇಹಿತರ ಜತೆ ನೆಚ್ಚಿನ ಕ್ರೀಡೆ ವೀಕ್ಷಿಸಿದ ಮಾಹಿ

ಯುಎಸ್: ಟೀಮ್ ಇಂಡಿಯಾದ ಶ್ರೇಷ್ಠ ನಾಯಕ, ಕ್ರಿಕೆಟ್ ಅಭಿಮಾನಿಗಳ ಅಚ್ಚುಮೆಚ್ಚಿನ ಕ್ಯಾಪ್ಟನ್, ಕ್ರಿಕೆಟರ್​ ಮಹೇಂದ್ರ ಸಿಂಗ್ ಧೋನಿ ಸದ್ಯ ವಿದೇಶಿ ನೆಲದಲ್ಲಿ ಸಮಯ ಕಳೆಯುತ್ತಿದ್ದಾರೆ. ದಿಢೀರ್​ ಸ್ನೇಹಿತರೊಂದಿಗೆ ಅಮೆರಿಕಾಗೆ ತೆರಳಿರುವ ಮಾಹಿ, ಅಲ್ಲಿನ ಸ್ಟೇಡಿಯಂನಲ್ಲಿ ತಮ್ಮ ನೆಚ್ಚಿನ ಕ್ರೀಡೆಯನ್ನು ಸ್ನೇಹಿತರೊಂದಿಗೆ ವೀಕ್ಷಿಸಿದ ಫೋಟೋ, ವಿಡಿಯೋಗಳು ಇದೀಗ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಒಂದೆಡೆ 'ಕ್ಯಾಪ್ಟನ್ ಕೂಲ್' 2025ರ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪರ ಆಡ್ತಾರಾ? ಎಂಬ ಪ್ರಶ್ನೆಗಳು ವ್ಯಾಪಕವಾಗಿ ಚರ್ಚೆಯಾಗುತ್ತಿದ್ದರೆ, ಧೋನಿ ಮಾತ್ರ ಈ ಬಗ್ಗೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡದೆ ತಮ್ಮ ಸಮಯಕ್ಕಾಗಿ ಕಾಯುತ್ತಿರುವುದು ಮತ್ತೊಂದೆಡೆ. ಸದ್ಯ ಐಪಿಎಲ್​ ವಿಚಾರದಿಂದ ಭಾರೀ ಚರ್ಚೆಗೆ ಗ್ರಾಸವಾಗಿರುವ ಮಾಹಿ ಇದೀಗ ಯುನೈಟೆಡ್ ಸ್ಟೇಟ್ಸ್‌ನ ಮಿಚಿಗನ್‌ನಲ್ಲಿ ತಮ್ಮ ಸ್ನೇಹಿತರೊಂದಿಗೆ ಅಮೆರಿಕನ್ ಫುಟ್‌ಬಾಲ್ ಮ್ಯಾಚ್​ ವೀಕ್ಷಿಸಿದ್ದಾರೆ.

ಸ್ನೇಹಿತರೊಂದಿಗೆ ವಿದೇಶದಲ್ಲಿ ಹಾಯಾದ ಸಮಯ ಕಳೆಯುತ್ತಿರುವ ಧೋನಿ, ಸ್ಟೇಡಿಯಂನಲ್ಲಿ ಫುಟ್​ಬಾಲ್​ ಪಂದ್ಯವನ್ನು ಆನಂದಿಸುತ್ತಿರುವುದು ವೈರಲ್ ಫೋಟೋ ಮೂಲಕ ತಿಳಿದುಬಂದಿದೆ. ಕ್ಯಾಪ್ಟನ್ ಕೂಲ್ ಸ್ಮೈಲ್ ಮಾಡ್ತಿರುವ ಫೋಟೋವನ್ನು ಅವರ ಸ್ನೇಹಿತರಲ್ಲೇ ಒಬ್ಬರು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿರುವ ಫೋಟೋಗಳು ಮಾಹಿ ಅಭಿಮಾನಿಗಳಿಗೆ ಭಾರೀ ಸಂತಸ ನೀಡಿದೆ,(ಏಜೆನ್ಸೀಸ್).