ಸಾಂದರ್ಭಿಕ ಚಿತ್ರ 
ನ್ಯೂಸ್

ಬಿಹಾರ ಮಾಜಿ ಡಿಸಿಎಂ ಸುಶೀಲ್​ ಕುಮಾರ್ ಮೋದಿ ತಮ್ಮನೂ ಕೋವಿಡ್​ಗೆ ಬಲಿ; ಅಶೋಕ್ ಕುಮಾರ್ ಮೋದಿ ಇನ್ನಿಲ್ಲ

ನವದೆಹಲಿ: ಕೋವಿಡ್​-19 ವೈರಸ್​ ವಿಶ್ವವ್ಯಾಪಿಯಾಗಿ ಮರಣ ಮೃದಂಗ ಬಾರಿಸುತ್ತಿದ್ದು, ಸಾವಿನ ಪಟ್ಟಿಯಲ್ಲಿ ವಯಸ್ಕರು-ವೃದ್ಧರು, ಶ್ರೀಮಂತರು-ಪ್ರಭಾವಿಗಳು ಎನ್ನದೆ ಎಲ್ಲರ ಹೆಸರೂ ದಾಖಲಾಗುತ್ತಿದೆ. ಆಕ್ಸಿಜನ್, ಐಸಿಯು, ಬೆಡ್ ಸಿಗುತ್ತಿಲ್ಲ ಎಂಬ ಎಲ್ಲ ಇಲ್ಲಗಳ ನಡುವೆಯೂ ಏನೇ ಇದ್ದರೂ ಜೀವ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬಂಥ ಸಂಕಟದ ಸಂದರ್ಭಗಳನ್ನೂ ಈ ಕರೊನಾ ಕಗ್ಗಂಟು ಸೃಷ್ಟಿಸಿದೆ.

ಇದೀಗ ಮಾಜಿ ಡಿಸಿಎಂ ಒಬ್ಬರ ಸಹೋದರ ಕೂಡ ಕೋವಿಡ್​ಗೆ ಬಲಿಯಾಗಿದ್ದಾರೆ. ಬಿಹಾರದ ಮಾಜಿ ಡಿಸಿಎಂ, ಹಾಲಿ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಅವರ ಸಹೋದರ ಅಶೋಕ್ ಕುಮಾರ್​ ಮೋದಿ (65) ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

'ನನ್ನ ಕಿರಿಯ ಸಹೋದರ ಅಶೋಕ್ ಕುಮಾರ್ ಮೋದಿ ಕರೊನಾ ಸೋಂಕಿನಿಂದಾಗಿ ಇಂದು ಮಧ್ಯಾಹ್ನ 2.45ಕ್ಕೆ ನಿಧನರಾದರು. ಪಾಟ್ನಾದ ವೈದ್ಯರು ಎಲ್ಲ ಪ್ರಯತ್ನ ಮಾಡಿದರೂ ತಮ್ಮನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ' ಎಂಬುದಾಗಿ ಸುಶೀಲ್ ಕುಮಾರ್ ಮೋದಿ ಟ್ವೀಟ್ ಮೂಲಕ ದುಃಖ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)