ನ್ಯೂಸ್

'ಸಣ್ಣ ಮಗು ನಾನಲ್ಲ, ಲಾಲಿಪಾಪ್ ತಿನ್ನುತ್ತಿಲ್ಲ'; ಸಿ.ಟಿ. ರವಿ ಹೇಳಿಕೆಗೆ ಎಂ.ಪಿ. ರೇಣುಕಾಚಾರ್ಯ ತಿರುಗೇಟು

ಮೋಹನ್​ ಶೆಟ್ಟಿ

ದಾವಣಗೆರೆ: ಬಿಜೆಪಿ ಮಾಜಿ ಶಾಸಕ ಸಿ.ಟಿ. ರವಿ ನೀಡಿದ್ದ 'ನಾಟ್ ರೀಚಬಲ್' ಹೇಳಿಕೆಗೆ ಇದೀಗ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿರುಗೇಟು ನೀಡಿದ್ದು, ಸಣ್ಣ ಮಗು ನಾನಲ್ಲ, ಲಾಲಿಪಾಪ್ ತಿನ್ನುತ್ತಿಲ್ಲ ಎಂದು ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಎಂ.ಪಿ. ರೇಣುಕಾಚಾರ್ಯ, "ನಿನ್ನೆ ಮೊನ್ನೆ ಬಂದವರ ಮಾತಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಬಕೆಟ್ ಹಿಡಿಯುವ ರಾಜಕಾರಣ ಮಾಡುವುದಿಲ್ಲ. ನನ್ನ ಮೇಲೆ ಬೆದರಿಕೆ ಕರೆ ಬಂದಾಗ ಯಾರು ಮಾತನಾಡಿಲ್ಲ, ಈಗ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಲೋಕಸಭೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಚುನಾವಣೆಗೆ ಸ್ಪರ್ಧಿಸಬೇಕು ಎಂಬುದು ಜನರ ಅಪೇಕ್ಷೆಯಾಗಿದೆ" ಎಂದು ಹೇಳಿದರು.

"ಕಾಲೈ ತಸ್ಮೈ ನಮಃ ಮುಂದೆ ಏನಾಗಲಿದೆ ಕಾದು ನೋಡೋಣ. ಈಗಲೂ ನಾನು ಬಿಜೆಪಿಯ ಕಟ್ಟಾಳು, ಕಾಂಗ್ರೆಸ್​ಗೆ ಹೋಗುವ ನಿರ್ಧಾರ ಕೈಗೊಂಡಿಲ್ಲ. ಯಾರು ನಾಟ್ ರೀಚಬಲ್ ಎಂಬುದು ಎಲ್ಲರಿಗೂ ತಿಳಿದಿದೆ. ಸಣ್ಣ ಮಗು ನಾನಲ್ಲ, ಲಾಲಿಪಪ್ ತಿನ್ನುತ್ತಿಲ್ಲ. ಯಾರಿಂದಲೂ ಹೇಳಿಸಿಕೊಳ್ಳುವ ಅವಶ್ಯಕತೆ ನನಗಿಲ್ಲ" ಎಂದು ಹೇಳುವ ಮುಖೇನ ಸಿಟಿ ರವಿ ಹೇಳಿಕೆ ತಿರುಗೇಟು ನೀಡಿದ್ದಾರೆ.