ಮೈಸೂರು: ಒಂದೊಂದು ಬಾರಿ ಒಳ್ಳೆಯವರು ಮತ್ತು ಒಂದೊಂದು ಬಾರಿ ರಾಕ್ಷಸರು ರಾಜ್ಯವನ್ನು ಆಳುತ್ತಾರೆ. ಈಗ ರಾಕ್ಷಸರ ರಾಜ್ಯಭಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಶಿವಮೊಗ್ಗ ಪ್ರಕರಣ ಕುರಿತಾಗಿ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ರಾಕ್ಷಸರ ರಾಜ್ಯ ಇರುವುದು ಶಿವಮೊಗ್ಗ ಮತ್ತು ಕೋಲಾರದ ಪ್ರಕರಣವನ್ನು ನೋಡಿದರೆ ಗೊತ್ತಾಗುತ್ತಿದೆ. ಕರ್ನಾಟಕದಲ್ಲಿ ಒಳ್ಳೆಯವರ ಆಡಳಿತ ಹೋಗಿ ರಾಕ್ಷಸರ ರಾಜ್ಯ ಆಡಳಿತ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಕಲ್ಲು ಹೊಡೆಯುವ ಸಂಸ್ಕೃತಿ ಹಿಂದೂ ಧರ್ಮದವರಿಗೆ ಗೊತ್ತಿಲ್ಲ. ಸಾಮೂಹಿಕ ಪ್ರಾರ್ಥನೆ ಮಾಡಿ ಒಟ್ಟಾಗಿ ಹೊರಗಡೆ ಬಂದು ಚಾಕು, ಚೂರಿ ಹಿಡಿದು ಹಿಂದೆಯಿಂದ ಚುಚ್ಚುವುದು ಹಿಂದೂ ಸಂಸ್ಕೃತಿ ಅಲ್ಲ. ಚುಕ್ಕಾಣಿ ಹಿಡಿದವರ ಮನಸ್ಥಿತಿಯಂತೆ ಉಳಿದವರು ಇರುತ್ತಾರೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಅವರು ಎಲ್ಲವನ್ನು ನೋಡಿ ಕಣ್ಮುಚ್ಚಿಕೊಂಡು ಕುಳಿತಿದ್ದಾರೆ. ಪಿಎಫ್ಐ ಮೇಲಿನ ಕೇಸ್ ವಾಪಾಸ್ ಪಡೆದ ಕಾರಣ ಇವತ್ತು ವಿಕೃತಿಗಳು ವಿಜೃಂಭಿಸುತ್ತಿವೆ. ಸಿದ್ದರಾಮಯ್ಯ ಅವರೇ ಇದಕ್ಕೆ ಕಾರಣ. ಅವರು ಬಿಗಿ ಆಗಿ ಇದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಟೀಕಿಸಿದರು.
ಕಾವೇರಿ ನೀರು ವಿಚಾರವಾಗಿ ಮಾತನಾಡಿ, ತಮಿಳುನಾಡು ಸಿಎಂ ಸ್ಟಾಲಿನ್ ವಿರುದ್ದ ಒಬ್ಬರಾದರೂ ಮಾತಾಡಿದ್ದಾರಾ? ಈ ಸರ್ಕಾರಕ್ಕೆ ಬೆನ್ನುಮೂಳೆಯೇ ಇಲ್ಲ. ಸ್ಟಾಲಿನ್ ಬಗ್ಗೆ ಒಂದು ಹೇಳಿಕೆ ಕೊಡಲಿ ನೋಡೋಣಾ? ಎಂದು ಸವಾಲು ಹಾಕಿದರು. ಎದುರಾಳಿಗಳ ಮೇಲೆ ಉಡಾಫೆಯಿಂದ ಕೂಗಾಡುತ್ತಾರೆ. ಸ್ಟಾಲಿನ್ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ? ಸ್ಟಾಲಿನ್ ವಿರುದ್ಧ ಮಾತಾಡಲು ಕಾಂಗ್ರೆಸ್ನ ಎಲ್ಲ ನಾಯಕರಿಗೆ ತೊಡೆ ನಡುಗುತ್ತದೆ ಎಂದರು.
ದಸರಾ ವಿಚಾರವಾಗಿ ಪ್ರತಿಕ್ರಿಯಿಸಿ, ಬರ ಇದ್ದರೂ ಸಂಪ್ರದಾಯಕವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. 414 ವರ್ಷಗಳಿಂದಲೂ ದಸರಾ ನಡೆದುಕೊಂಡು ಬರುತ್ತಿದೆ. ಸ್ವತಂತ್ರ ಬಂದ ಕಾಲದಿಂದಲೂ ಯಾರೇ ಅಧಿಕಾರಿದಲ್ಲಿದ್ರೂ ದಸರಾ ಆಚರಣೆ ನಡೆದುಕೊಂಡು ಬಂದಿದೆ. 2015-16 ರಲ್ಲಿ ಮಹಿಷಾ ದಸರಾ ಹುಟ್ಟುಹಾಕಿದರು. ಯಾವಾಗಾ ದೆವ್ವ ದೇವರಾಯ್ತು ನಮಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಆಚರಣೆ ಆರಂಭವಾಯ್ತು. ನಿರಂತರ ಮೂರು ವರ್ಷ ಮಹಿಷಾ ಆಚರಣೆ ಮಾಡಿದ್ರು. ನಮ್ಮ ಬಿಜೆಪಿ ಸರ್ಕಾರ ಬಂದ ಮೇಲೆ ಮಹಿಷಾ ದಸರಾಗೆ ಬ್ರೇಕ್ ಹಾಕಿದ್ವಿ. ಬಿಜೆಪಿ ಸರ್ಕಾರದಲ್ಲಿ ಮಹಿಷಾ ದಸರಾ ಎಂಬ ಅಸಹ್ಯವನ್ನು ಹೊಸಕಿ ಹಾಕಿದ್ದೇವೆ. ಅನಾಚರ ನಿಂತ ಮೇಲೆ ಮೈಸೂರಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಈಗ ಮತ್ತೆ ಮಹಿಷಾ ದಸರಾ ಆಚರಣೆಗೆ ಮುಂದಾಗಿದ್ದಾರೆ. ಚಾಮುಂಡಿ ತಾಯಿಯ ಗೌರವ ಸಂರಕ್ಷಣೆಗೋಸ್ಕರ ಮೈಸೂರಿಗರ ಬೆಂಬಲ ಪ್ರೋತ್ಸಾಹ ಪಡೆದು ಅ. 13 ರಂದು ಬೆಳಗ್ಗೆ 8 ಗಂಟೆಗೆ ಚಲೋ ಚಾಮುಂಡಿ ಬೆಟ್ಟ ನಡೆಸುತ್ತಿದ್ದೇವೆ. ಸುಮಾರು 5 ಸಾವಿರ ಜನರು ಸೇರುತ್ತಾರೆ. ಅಂದು ಇಡೀ ದಿನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದು ಬಿಜೆಪಿ ಪಕ್ಷದ ಕಾರ್ಯಕ್ರಮವಲ್ಲ. ಇಂದು ಜಿಲ್ಲಾಧಿಕಾರಿ ಭೇಟಿ ಮಾಡಿ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಮನವಿ ಮಾಡುತ್ತೇವೆ ಎಂದರು.