ನ್ಯೂಸ್

ನೀವು ಬಾದಾಮಿಯಲ್ಲಿ ಹುಟ್ಟಿ ಗೋಲಿ ಆಡಿದ್ದೀರಾ? ಸಿದ್ದರಾಮಯ್ಯ ಟ್ವೀಟ್​ಗೆ ಪ್ರತಾಪ್ ಸಿಂಹ ಟಾಂಗ್

ಬೆಂಗಳೂರು: ಇಟಲಿಯಲ್ಲಿ ಹುಟ್ಟಿದ ಸೋನಿಯಾಗಾಂಧಿ ಬಳ್ಳಾರಿಯಲ್ಲಿ ಚುನಾವಣೆಗೆ ನಿಲ್ಲಬಹುದು, ಅಲಹಾಬಾದ್​ನಲ್ಲಿ ಜನಿಸಿದ ಇಂದಿರಾ ಗಾಂಧಿ ಚಿಕ್ಕಮಗಳೂರಿಗೆ ಬರಬಹುದು. ವಿದೇಶಿ ಅಮ್ಮನಿಗೆ ದಿಲ್ಲಿಯಲ್ಲಿ ಹುಟ್ಟಿದ ರಾಹುಲ್ ಗಾಂಧಿ ಕೇರಳದ ವಯನಾಡಿಗೆ ಹೋಗಬಹುದು. ವಿ.ಸೋಮಣ್ಣ ವರುಣ ಕ್ಷೇತ್ರಕ್ಕೆ ಬರಬಾರದಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಅಲ್ಲದೇ, ನೀವು ಬಾದಾಮಿಯಲ್ಲಿ ಹುಟ್ಟಿ ಗೋಲಿ ಆಡಿದ್ದೀರಾ ಎಂದು ಟ್ವಿಟರ್​ನಲ್ಲಿ ಟಾಂಗ್ ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ, ರಾಮನಗರ ಮೂಲದ, ಬೆಂಗಳೂರು ನಗರದಲ್ಲಿ ರಾಜಕೀಯ ಮಾಡಿಕೊಂಡಿದ್ದ ಸೋಮಣ್ಣ ಅವರನ್ನು ಬಿಜೆಪಿ ಒತ್ತಾಯಪೂರ್ವಕವಾಗಿ ವರುಣ ಕ್ಷೇತ್ರಕ್ಕೆ ಕರೆತಂದು ಕಣಕ್ಕಿಳಿಸಿದೆ. ಇದು ಬಿಜೆಪಿಯ ಹರಕೆಯ ಕುರಿ ಮತ್ತು ವರುಣಾದ ಮನೆ ಮಗನ ನಡುವಿನ ಚುನಾವಣೆ. ನನ್ನ ಜನ ಹಣಕ್ಕೆ ಮರುಳಾಗಿ ತಮ್ಮವರನ್ನು ಕೈಬಿಡುವವರಲ್ಲ ಎಂದು ಹೇಳಿದ್ದರು.

ಅಲ್ಲದೆ, ನಾನು ವರುಣಾ ಕ್ಷೇತ್ರದಲ್ಲಿ ಹುಟ್ಟಿ ಬೆಳೆದ, ಇಲ್ಲಿನ‌ ಮಣ್ಣಿನ‌ ಮಗ. ಇವ ನಮ್ಮವ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಈ ಹಿಂದೆ ವರುಣಾವನ್ನು ಪ್ರತಿನಿಧಿಸಿದಾಗೆಲ್ಲ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ದುಡಿದಿದ್ದೇನೆ. ನನ್ನ ಸಾಧನೆಗಳು ಇಲ್ಲಿನ ಜನರ ಬದುಕಿನಲ್ಲಿದೆ. ನನ್ನ ಗೆಲುವಿಗೆ ಇದಕ್ಕಿಂತ ಹೆಚ್ಚೇನು ಬೇಕು? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.