ನ್ಯೂಸ್

ಮದ್ಯಪ್ರದೇಶ ಸಿಎಂ ಆಯ್ಕೆ ಬಿಕ್ಕಟ್ಟು; ಸೋಮವಾರ ತೆರೆಬೀಳುವ ಸಾಧ್ಯತೆ!

ಭೋಪಾಲ್: ಇತ್ತೀಚಿಗೆ ಮುಕ್ತಾಯಗೊಂಡ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿ ವಾರ ಕಳೆಯುತ್ತಾ ಬಂದರೂ ಈವರೆಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗಿಲ್ಲ. ಇದರಿಂದ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಜನರಲ್ಲಿ ಹೆಚ್ಚಿದ್ದು, ಸೋಮವಾರ ಇದಕ್ಕೆಲ್ಲಾ ತೆರೆ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಆಯ್ಕೆ ಸಂಬಂಧ ಮೂವರು ವೀಕ್ಷಕರು ಭೋಪಾಲ್‌ಗೆ ಸೋಮವಾರ ಆಗಮಿಸಲಿದ್ದಾರೆ. ಮಧ್ಯಪ್ರದೇಶದ ಸಿಎಂ ಸ್ಥಾನವನ್ನು ಹಾಲಿ ಸಿಎಂ ಶಿವರಾಜಸಿಂಗ್‌ ಚೌಹಾಣ್‌ ಉಳಿಸಿಕೊಳ್ಳುವರೇ ಅಥವಾ ಹೊಸಬರಿಗೆ ಅವಕಾಶ ಸಿಗಲಿದೆಯಾ ಎನ್ನುವ ಚರ್ಚೆಗಳು ರಾಜ್ಯ ಹಾಗೂ ಬಿಜೆಪಿ ವಲಯದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.

ನೂತನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಬಿಜೆಪಿ ಈಗಾಗಲೇ ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್​, ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಕೆ. ಲಕ್ಷ್ಮಣ್​, ಪ್ರಧಾನ ಕಾರ್ಯದರ್ಶಿ ಆಶಾ ಲಾಕ್ರ ಅವರನ್ನು ವೀಕ್ಷಕರನ್ನಾಗಿ ನೇಮಿಸಿದ್ದು, ಇವರು ಸಲ್ಲಿಸುವ ವರದಿಯನ್ನು ಆಧರಿಸಿ ಬಿಜೆಪಿ ವರಿಷ್ಠರು ನೂತನ ಮುಖ್ಯಮಂತ್ರಿಯನ್ನು ಘೋಷಿಸಲಿದ್ದಾರೆ.

ಭೋಪಾಲ್​ನಲ್ಲಿ ಸೋಮವಾರ ಮಧ್ಯಾಹ್ನ ಭೋಜನ ಕೂಟ ಏರ್ಪಡಿಸಲಾಗಿದ್ದು, ಇದಾದ ಬಳಿಕ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಂಬಂಧ ಸಭೆ ನಡೆಯಲಿದೆ. ರಾತ್ರಿ 7 ಘಂಟೆ ಸುಮಾರಿಗೆ ಸಭೆ ಕೊನೆಗೊಳ್ಳಲಿದ್ದು, ಇದಾದ ಬಳಿಕ ರಾಜ್ಯದ ಮುಖ್ಯಮಂತ್ರಿ ಯಾರೆಂಬುದು ತಿಳಿಯಲಿದೆ ಎಂದು ಬಿಜೆಪಿಯ ಹಿರಿಯ ಶಾಸಕರೊಬ್ಬರು ತಿಳಿಸಿದ್ದಾರೆ.

ಕಳೆದ 19 ವರ್ಷಗಳಲ್ಲಿ ಮೂರನೇ ಬಾರಿಗೆ ಬಿಜೆಪಿ ಮಧ್ಯಪ್ರದೇಶಕ್ಕೆ ಕೇಂದ್ರ ವೀಕ್ಷಕರನ್ನು ಕಳುಹಿಸುತ್ತಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿಯನ್ನು ಘೋಷಿಸದೆ ಚುನಾವಣೆಯನ್ನು ಎದುರಿಸಿ ಅಭೂತಪೂರ್ವ ಗೆಲುವನ್ನು ಸಾಧಿಸಿರುವುದು ರಾಷ್ಟ್ರ ರಾಜಕಾರಣ ಗಮನ ಸೆಳೆದಿದೆ. 230 ಸದಸ್ಯಬಲದ ಮಧ್ಯಪ್ರದೇಶ ವಿಧಾನಸಬೆಗೆ ನವೆಂಬರ್​ 17ರಂದು ಮತದಾನ ನಡೆದಿತ್ತು. 163 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಧಿಕಾರದ ಗೆದ್ದುಗೆಗೆ ಏರಿತ್ತು. 66 ಸ್ಥಾನಗಳಲ್ಲಿ ಕಾಂಗ್ರೆಸ್​ ಗೆದ್ದಿದೆ.