ನ್ಯೂಸ್

ಟಿಎಂಸಿ ಸಂಸದೆಯ ರಹಸ್ಯ ಮದುವೆ: 65 ವರ್ಷದ ಬಿಜೆಡಿ ನಾಯಕನನ್ನು ವರಿಸಿದ ಮಹುವಾ ಮೊಯಿತ್ರಾ! Mahua Moitra

Mahua Moitra : ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಬಿಜು ಜನತಾದಳ (ಬಿಜೆಡಿ)ದ ಹಿರಿಯ ನಾಯಕ ಪಿನಾಕಿ ಮಿಶ್ರಾ ಅವರನ್ನು ವರಿಸಿದ್ದಾರೆ.

ಮೊಯಿತ್ರಾ ಮತ್ತು ಮಿಶ್ರಾ 14 ದಿನಗಳ ಹಿಂದೆಯೇ ಬರ್ಲಿನ್‌ನಲ್ಲಿ ವಿವಾಹವಾದರು ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ಇತ್ತೀಚೆಗೆ ರಾಷ್ಟ್ರೀಯ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದರು. ಬಳಿಕ ಈ ಬಗ್ಗೆ ಸ್ಪಷ್ಟನೆ ಪಡೆಯಲು ಮಾಧ್ಯಮಗಳು ಮೊಯಿತ್ರಾ ಅವರನ್ನು ಸಂಪರ್ಕಿಸಿದಾಗ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದರೀಗ ವದಂತಿಗಳ ನಡುವೆಯೇ, ಸಂಸದೆ ಮಹುವಾ ಮೊಯಿತ್ರಾ ಅಧಿಕೃತ ಘೋಷಣೆ ಮಾಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಖಾತೆ ಎಕ್ಸ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. 50 ವರ್ಷದ ಮಹುವಾ ಮೊಯಿತ್ರಾ, 65 ವರ್ಷದ ಪಿನಾಕಿ ಮಿಶ್ರಾ ಅವರೊಂದಿಗೆ ಕೇಕ್ ಕತ್ತರಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ತಮಗೆ ಶುಭ ಹಾರೈಸಿದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಮಹುವಾ ಮೊಯಿತ್ರಾ ಅವರು 1974ರಲ್ಲಿ ಅಸ್ಸಾಂನಲ್ಲಿ ಜನಿಸಿದರು. ಅವರು ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಅವರು ಹೂಡಿಕೆ ಬ್ಯಾಂಕರ್ ಆಗಿ ಕೆಲಸ ಮಾಡಿದ್ದಾರೆ. 2010ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸೇರಿದರು. ಅಲ್ಲಿಂದ ಅವರ ರಾಜಕೀಯ ಜೀವನ ಪ್ರಾರಂಭವಾಯಿತು. 2019 ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಗೆದ್ದರು. ಅಲ್ಲದೇ, 2024ರ ಚುನಾವಣೆಗಳಲ್ಲಿಯೂ ಗೆದ್ದರು. ಮೊಯಿತ್ರಾ ಅವರು ಈ ಹಿಂದೆ ಡ್ಯಾನಿಶ್ ಪ್ರಜೆ ಲಾರ್ಸ್ ಬ್ರೋರ್ಸೆನ್ ಅವರನ್ನು ಮದುವೆಯಾಗಿದ್ದರು. ನಂತರ ಅವರಿಂದ ವಿಚ್ಛೇದನ ಪಡೆದರು. ಬಳಿಕ ವಕೀಲ ಜೈ ಆನಂದ್ ದೇಹಾದ್ರಿ ಅವರೊಂದಿಗೆ ಸಂಬಂಧದಲ್ಲಿದ್ದರು. ಅವರಿಂದಲೂ ದೂರವಾದರು.

ಮತ್ತೊಂದೆಡೆ, ನವ ವರ ಪಿನಾಕಿ ಮಿಶ್ರಾ 1959 ರಲ್ಲಿ ಜನಿಸಿದರು. ಪ್ರಸ್ತುತ ಅವರಿಗೆ 65 ವರ್ಷ. ಅವರು ಒಡಿಶಾದ ಪುರಿ ಕ್ಷೇತ್ರದಿಂದ ಹಲವಾರು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಪ್ರಸ್ತುತ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದಾರೆ. ದೆಹಲಿಯ ಪ್ರಸಿದ್ಧ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಇತಿಹಾಸದಲ್ಲಿ ಪದವಿ ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಮೂಲಕ ಮೊದಲು ರಾಜಕೀಯ ಪ್ರವೇಶಿಸಿದ ಪಿನಾಕಿ ಮಿಶ್ರಾ 1996 ರಲ್ಲಿ ಪುರಿ ಸ್ಥಾನದಿಂದ ಗೆದ್ದರು. ನಂತರ, ಅವರು ಬಿಜೆಡಿ ಸೇರಿ ಹಲವಾರು ಅವಧಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಮಿಶ್ರಾ ಅವರಿಗೆ ಈ ಹಿಂದೆ ಮದುವೆಯಾಗಿದ್ದು, ಒಬ್ಬ ಮಗ ಮತ್ತು ಮಗಳು ಇದ್ದಾರೆ. (ಏಜೆನ್ಸೀಸ್​)