ಬೆಂಗಳೂರು: ಕನ್ನಡದ ಪರವಾಗಿ ಇತ್ತೀಚೆಗಷ್ಟೇ ಸಂಸತ್ ಅಧಿವೇಶನದಲ್ಲಿ ದನಿ ಎತ್ತಿದ್ದ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಇದೀಗ ಮತ್ತೊಮ್ಮೆ ಕನ್ನಡದ ಪರವಾಗಿ ಮಾತನಾಡುವ ಮೂಲಕ ಮುಖ್ಯಮಂತ್ರಿಯವರ ಗಮನ ಸೆಳೆಯುವ ಪ್ರಯತ್ನವನ್ನೂ ಮಾಡಿದ್ದಾರೆ.
ಕೇಂದ್ರ ಸರ್ಕಾರ ಕನ್ನಡ ಭಾಷಾ ಅಭಿವೃದ್ಧಿಗೆ ಅನುದಾನ ನೀಡುವಲ್ಲಿ ತಾರತಮ್ಯವೆಸಗಿರುವ ಕುರಿತು 20 ದಿನಗಳ ಹಿಂದೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದ ಜಿ.ಸಿ. ಚಂದ್ರಶೇಖರ್, ಕೇಂದ್ರ ಸರ್ಕಾರ ಕೂಡಲೇ ಸರಿಪಡಿಸಿಕೊಂಡು ಕನ್ನಡಕ್ಕೆ ತೋರಿರುವ ಮಲತಾಯಿ ಧೋರಣೆ ತೊರೆಯಬೇಕು ಎಂದು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಪೂರಕವಾಗಿ ಅವರು ಕಳೆದ ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಕನ್ನಡ ಹಾಗೂ ಸಂಸ್ಕೃತಕ್ಕೆ ಬಿಡುಗಡೆ ಆಗಿರುವ ಅನುದಾನದಲ್ಲಿನ ವ್ಯತ್ಯಾಸವನ್ನು ಅಂಕಿ-ಅಂಶ ಸಹಿತ ತಿಳಿಸಿದ್ದರು. ಇದೀಗ ಮತ್ತೊಮ್ಮೆ ಕನ್ನಡದ ಪರವಾಗಿ ಬಹಿರಂಗವಾಗಿಯೇ ಮಾತನಾಡಿರುವ ಅವರು, ಇಎಸ್ಐಸಿ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ದೇಶಾದ್ಯಂತ 3,865 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಕರ್ನಾಟಕ ವಲಯದಲ್ಲೂ ನೇಮಕಾತಿ ನಡೆಯುತ್ತಿದೆ. ಆದರೆ ಕರ್ನಾಟಕದಲ್ಲಿನ ಹುದ್ದೆಗಳಿಗೂ ನೇಮಕಾತಿ ಪರೀಕ್ಷೆಯನ್ನು ಇಂಗ್ಲಿಷ್ ಹಾಗೂ ಹಿಂದಿಯಲ್ಲೇ ಬರೆಯಬೇಕಿದ್ದು, ಕನ್ನಡಕ್ಕೆ ಅವಕಾಶ ಕೊಟ್ಟಿಲ್ಲ. ಈ ಕುರಿತು ವಿಶೇಷ ವರದಿಯನ್ನು ವಿಜಯವಾಣಿ ಡಿ. 30ರ ಸಂಚಿಕೆಯಲ್ಲಿ ಪ್ರಕಟಿಸಿದೆ.
ಇದನ್ನೂ ಓದಿ: 25 ಸಾವಿರಕ್ಕೂ ಅಧಿಕ ಮಾತ್ರೆ ತಿಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಗುಂಡು ಹೊಡೆದುಕೊಂಡು ಬಿಇಒ ಆತ್ಮಹತ್ಯೆ!
ಇಎಸ್ಐಸಿ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ವಿವರವಾಗಿ ಅನಾವರಣಗೊಳಿಸಿರುವ ವಿಜಯವಾಣಿಯ ಈ ವಿಶೇಷ ವರದಿಯನ್ನು ಟ್ವೀಟ್ ಮಾಡಿ ಪ್ರಸ್ತಾಪಿಸಿರುವ ಚಂದ್ರಶೇಖರ್, ಈ ಕುರಿತು ಸಿಎಂ ಗಮನ ಸೆಳೆದಿದ್ದಾರೆ. "ಕೇಂದ್ರದ ಕಾರ್ಮಿಕ ಇಲಾಖೆಯ ಇಎಸ್ಐಸಿ ಕರ್ನಾಟಕದ ಕೆಲಸಗಳಿಗೆ ಬೇರೆ ರಾಜ್ಯದ ಯಾರು ಬೇಕಾದರೂ ಅರ್ಜಿ ಹಾಕಬಹುದು. ಹಾಗೆಯೇ ಅಟೆಂಡರ್ ಕೆಲಸಗಳಿಗೆ ಇಂಗ್ಲಿಷ್-ಹಿಂದಿಯಲ್ಲೇ ಪರೀಕ್ಷೆ , ಎಲ್ಲಿಗೆ ಬಂದು ನಿಂತಿದೆ ಒಕ್ಕೂಟ ವ್ಯವಸ್ಥೆ? ಮಾನ್ಯ ಮುಖ್ಯಮಂತ್ರಿಯವರೇ ಇತ್ತ ಗಮನ ಹರಿಸಿ.." ಎಂದು ಅವರು ಕನ್ನಡಿಗರ ಪರವಾಗಿ ದನಿ ಎತ್ತಿದ್ದಾರೆ.