ನ್ಯೂಸ್

ಚೆನ್ನೈಗೆ ಬಂದಿದ್ದರೂ ಸ್ಟಾಲಿನ್ ಅವರ ಸಭೆಗೆ ಹಾಜರಾಗದ ಪವನ್ ಕಲ್ಯಾಣ್​ ಪಕ್ಷದ ಸಂಸದ; ತಕ್ಷಣವೇ ಹಿಂದಿರುಗಲು ಕಾರಣವೇನು? | JSP MP

ಚೆನ್ನೈ : ಕ್ಷೇತ್ರ ಪುನರ್ವಿಂಗಡಣೆ(Delimitation) ವಿಷಯದ ಕುರಿತು ಚೆನ್ನೈನಲ್ಲಿ ಶನಿವಾರ ವಿರೋಧ ಪಕ್ಷಗಳ ಮುಖ್ಯಮಂತ್ರಿಗಳ ಸಭೆ ನಡೆಯಿತು. ಈ ಸಭೆಯನ್ನು ಜಂಟಿ ಕ್ರಿಯಾ ಸಮಿತಿ (ಜೆಎಸಿ) ಎಂದು ಹೆಸರಿಸಲಾಯಿತು. ಈ ಸಭೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆಯೋಜಿಸಿದ್ದರು. ಸಭೆಯಲ್ಲಿ ಭಾಗವಹಿಸಲು ಜನಸೇನಾ ಪಕ್ಷದ (ಜೆಎಸ್‌ಪಿ) ಸಂಸದ(JSP MP) ತಂಗೇಲ ಉದಯ ಶ್ರೀನಿವಾಸ್ ಆಗಮಿಸಿದ್ದರು. ಆದರೆ ಸಭೆ ಪ್ರಾರಂಭವಾಗುವ ಮೊದಲೇ ಅವರು ಚೆನ್ನೈನಿಂದ ಹೊರಟುಹೋಗಿದ್ದಾರೆ.

ಜೆಎಸ್‌ಪಿ ಆಂಧ್ರಪ್ರದೇಶದಲ್ಲಿ ಎನ್‌ಡಿಎ ಸರ್ಕಾರದ ಭಾಗವಾಗಿದೆ ಮತ್ತು ಅದರ ಅಧ್ಯಕ್ಷ ಪವನ್ ಕಲ್ಯಾಣ್ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದಾರೆ. ಶುಕ್ರವಾರ ರಾತ್ರಿ 8:30ಕ್ಕೆ ಜೆಎಸ್‌ಪಿ ಸಂಸದ ಶ್ರೀನಿವಾಸ್ ದೆಹಲಿಯಿಂದ ಚೆನ್ನೈಗೆ ಬಂದಾಗ ಡಿಎಂಕೆ ಸಂಸದರಾದ ಪಿ. ವಿಲ್ಸನ್ ಮತ್ತು ಎಂ.ಎಂ. ಅಬ್ದುಲ್ಲಾ ವಿಮಾನ ನಿಲ್ದಾಣದಲ್ಲಿ ಶ್ರೀನಿವಾಸ್ ಅವರನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು. ನಂತರ ಶ್ರೀನಿವಾಸ್ ಅವರನ್ನು ಐಟಿಸಿ ಗ್ರ್ಯಾಂಡ್ ಹೋಟೆಲ್‌ಗೆ ಕರೆದೊಯ್ಯಲಾಯಿತು. ಅಲ್ಲಿಯೇ ಶನಿವಾರ ವಿರೋಧ ಪಕ್ಷಗಳ ಸಭೆ ನಡೆಯಿತು.

ಮಧ್ಯರಾತ್ರಿಯ ಸುಮಾರಿಗೆ ಶ್ರೀನಿವಾಸ್ ಅವರಿಗೆ ಕರೆ ಬಂದು ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಚೆನ್ನೈನಿಂದ ಹಿಂತಿರುಗಲು ಬಯಸಿದ್ದಾರೆಂದು ಮೂಲಗಳು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅಧಿಕೃತವಾಗಿ ಶ್ರೀನಿವಾಸ್ ಸಭೆಗೆ ಹಾಜರಾಗುವುದಿಲ್ಲ, ಶ್ರೀನಿವಾಸ್ ಇದ್ದಕ್ಕಿದ್ದಂತೆ ಸಭೆಯಿಂದ ಹೊರಬಂದು ಹಿಂತಿರುಗಲು ಕಾರಣವೇನು ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರೊಂದಿಗೆ ಮಾತನಾಡುವುದಾಗಿ ಪವನ್​​ ಕಲ್ಯಾಣ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಆದರೆ ಆಯೋಜನಾ ಸಮಿತಿಯ ಮೂಲಗಳು ಸಭೆಯಲ್ಲಿ ಅವರಿಗೆ ಒಂದು ಸ್ಥಾನವನ್ನು ಕಾಯ್ದಿರಿಸಲಾಗಿತ್ತು ಎಂದು ತಿಳಿಸಿವೆ. ಸಭೆಯಲ್ಲಿ ಭಾಗವಹಿಸುವ ಮೊದಲು ಡಿಎಂಕೆ ಶ್ರೀನಿವಾಸ್ ಅವರ ನಿರ್ಗಮನದ ಬಗ್ಗೆ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಆದರೆ ಪಕ್ಷದ ಹಿರಿಯ ನಾಯಕರೊಬ್ಬರು ಶ್ರೀನಿವಾಸ್ ಇಲ್ಲಿಗೆ ಬಂದಿದ್ದರೆ ಅದಕ್ಕೆ ಸ್ವಲ್ಪ ಅರ್ಥವಿರಬೇಕು ಎಂದು ಹೇಳಿದರು.

ಪವನ್ ಕಲ್ಯಾಣ್ ಅವರ ರಾಜಕೀಯ ಕಾರ್ಯದರ್ಶಿ ಪಿ.ಹರಿಪ್ರಸಾದ್ ಮಾತನಾಡಿ, ಡಿಎಂಕೆ ನಾಯಕರ ನಿಯೋಗವು ನಮ್ಮನ್ನು ಭೇಟಿ ಮಾಡಿ ಆಹ್ವಾನಿಸಿತು. ಆದರೆ ನಾವು ವಿಭಿನ್ನ ಮೈತ್ರಿಕೂಟಗಳಿಗೆ ಸೇರಿದವರಾಗಿರುವುದರಿಂದ ನಮ್ಮ ಪಕ್ಷವು ಸಭೆಗೆ ಹಾಜರಾಗುವುದಿಲ್ಲ ಎಂದು ಗೌರವದಿಂದ ಅವರಿಗೆ ತಿಳಿಸಿದೆವು ಎಂದಿದ್ದಾರೆ.

ಇದಲ್ಲದೆ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಕೂಡ ಈ ವಿಷಯದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ಕುರಿತು ಪಕ್ಷದ ನಿಲುವನ್ನು ತಿಳಿಸುವ ಪತ್ರದೊಂದಿಗೆ ಶ್ರೀನಿವಾಸ್ ಅವರನ್ನು ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಚೆನ್ನೈಗೆ ಕಳುಹಿಸಿದ್ದಾರೆ ಎಂದು ಜೆಎಸ್‌ಪಿ ಹೇಳಿದೆ. ಡಿಎಂಕೆ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹರಡುತ್ತಿರುವ ವರದಿಗಳು ಸಂಪೂರ್ಣ ಸುಳ್ಳು ಎಂದು ಪಕ್ಷ ಹೇಳಿದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮೂಲಕ ಹಿಂದಿ ಹೇರಿಕೆಯ ಆರೋಪದ ಬಗ್ಗೆ ಕಳೆದ ವಾರ ಪವನ್ ಕಲ್ಯಾಣ್ ಮತ್ತು ಡಿಎಂಕೆ ನಡುವೆ ಸಾಕಷ್ಟು ಚರ್ಚೆ ನಡೆದಿತ್ತು.(ಏಜೆನ್ಸೀಸ್​​)