ಶಿವಮೊಗ್ಗ: ಕಳೆದ ಫೆಬ್ರವರಿ 20ರಂದು ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಶಿವಮೊಗ್ಗದ ಹರ್ಷನ ಮನೆಗೆ ಬಿಜೆಪಿ ಸಂಸದೆ, ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಭೇಟಿ ನೀಡಿ ಹರ್ಷನ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಶಿವಮೊಗ್ಗದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಜಾಗರಣ ವೇದಿಕೆಯ 3ನೇ ತ್ರೈಮಾಸಿಕ ಪ್ರಾಂತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಾಧ್ವಿ ಪ್ರಜ್ಞಾ, ಇದೇ ವೇಳೆ ಹರ್ಷನ ಮನೆಗೂ ಭೇಟಿ ನೀಡಿದ್ದರು.
ಬಳಿಕ ಮಾತನಾಡಿದ ಅವರು, ಹರ್ಷ ಹಿಂದೂ ಧರ್ಮದ ಜಾಗೃತಿಗಾಗಿ ಸಾವನ್ನಪ್ಪಿದ್ದಾನೆ. ಭೀಭತ್ಸವಾಗಿ ಹತ್ಯೆ ಮಾಡಲಾಗಿದೆ. ಪ್ರತಿಯೊಬ್ಬ ಹಿಂದೂ ಎಚ್ಚರಗೊಂಡಾಗ ಹೀಗೆ ನಡೆಯಲಿದೆ. ಆದರೆ ಹರ್ಷನ ಹಾಗೇ ಪ್ರತಿಯೊಬ್ಬ ಹುಟ್ಟುತ್ತಿರುತ್ತಾನೆ. ಹರ್ಷನ ಕುಟುಂಬದ ಜೊತೆಗೆ ಹಿಂದೂ ಸಮಾಜವಿದೆ. ಹರ್ಷನ ಸಾವು ವ್ಯರ್ಥವಾಗಲು ಬಿಡಲ್ಲ ಎಂದರು.
ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರು ಭಯೋತ್ಪಾದಕತೆಯನ್ನು ಸಮರ್ಥವಾಗಿ ಮಟ್ಟ ಹಾಕುತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿ ದತ್ತಪೀಠಕ್ಕೆ ಭೇಟಿ ನೀಡಲಿದ್ದೇನೆ. ಶಂಕರಾಚಾರ್ಯರು ಸಂಚಾರ ಮಾಡಿದ ನಾಡಿದು. ನಾನು ದತ್ತ ಭಗವಾನ್ರ ಭಕ್ತೆಯೂ ಹೌದು. ಹಾಗಾಗಿ ದತ್ತಪೀಠದಲ್ಲಿ ಪೂಜೆ ಸಲ್ಲಿಸಲಿದ್ದೇನೆ. ದತ್ತ ಪೀಠದ ವಿವಾದ ಇತರೆ ವಿವಾದಗಳಂತೆ ಶೀಘ್ರವಾಗಿ ಬಗೆಹರಿಯುವ ವಿಶ್ವಾಸವಿದೆ. ಪಕ್ಷ ಬಯಸಿದರೆ ಮಧ್ಯಪ್ರದೇಶ ಹಾಗೂ ಕರ್ನಾಟಕದ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದರು.