ಚಂಡೀಗಢ: ಖಲಿಸ್ತಾನಿ ಬೆಂಬಲಿಗ ಹಾಗೂ ಖದೂರ್ ಸಾಹಿಬ್ ಸಂಸದ ಅಮೃತಪಾಲ್ ಸಿಂಗ್ ಅವರ ಸಹೋದರ ಹರ್ ಪ್ರೀತ್ಸಿಂಗ್ನನ್ನು ಡ್ರಗ್ ಪ್ರಕರಣದಲ್ಲಿ ಜಲಂಧರ್ ಪೊಲೀಸರು ಬಂಧಿಸಿದ್ದಾರೆ. ಹರ್ಪ್ರೀತ್ ಜತೆಗೆ ಆತನ ಸಹಚರ ಲವ್‌ಪ್ರೀತ್ ಸಿಂಗ್ ಅಲಿಯಾಸ್ ಲುವ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ(ಜುಲೈ 12) ತಿಳಿಸಿದ್ದಾರೆ.
ಇವರಿಬ್ಬರು ಪ್ರಯಾಣಿಸುತ್ತಿದ್ದ ಕಾರನ್ನು ಪರಿಶೀಲಿಸಿದಾಗ ಆತನಿಂದ ಐದು ಗ್ರಾಂ ICE (ಮೆಥಾಂಫೆಟಮೈನ್ನ ಒಂದು ರೂಪ) ಅನ್ನು ವಶಪಡಿಸಿಕೊಳ್ಳಲಾಗಿದೆ. ಡ್ರಗ್ಸ್ ಸಾಗಿಸುತ್ತಿದ್ದ ಕಾರಣ ಫಿಲ್ಲೌರ್ನಿಂದ ಅವರನ್ನು ಬಂಧಿಸಲಾಗಿದೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅವರ ತಂದೆ ತಾರ್ಸೆಮ್ ಸಿಂಗ್, ನಮ್ಮ ಕುಟುಂಬ ಹಾಗೂ ಅಮೃತಪಾಲ್ ಸಿಂಗ್ ಅವರ ಸಹಾಯಕರು ಮತ್ತು ಬೆಂಬಲಿಗರ ವಿರುದ್ಧದ ಪಿತೂರಿ ಮಾಡಲಾಗಿದೆ. ನಮ್ಮನ್ನು ದೂಷಿಸಲು ಸರ್ಕಾರ ಈ ಸಂಚು ರೂಪಿಸಿದೆ. ಸರ್ಕಾರ ತನ್ನ ವೈಫಲ್ಯವನ್ನು ಮರೆಮಾಚಲು ಹೀಗೆ ಮಾಡುತ್ತಿದ್ದೆ ಎಂದಿದ್ದಾರೆ.
ಇತ್ತೀಚೆಗಷ್ಟೇ ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ನಾಲ್ಕು ದಿನಗಳ ಕಸ್ಟಡಿ ಪೆರೋಲ್ ಮೇಲೆ ದೆಹಲಿಗೆ ಬಂದಿದ್ದ ಹರ್ ಪ್ರೀತ್ಸಿಂಗ್ ಸಹೋದರ ಅಮೃತಪಾಲ್ ಸಿಂಗ್, ಪ್ರಸ್ತುತ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯ ಅಪರಾಧದಲ್ಲಿ ಅಸ್ಸಾಂನ ದಿಬ್ರುಗಢ್ ಜಿಲ್ಲೆಯ ಜೈಲಿನಲ್ಲಿದ್ದಾರೆ. ಇತನ ಒಂಬತ್ತು ಸಹಚರರನ್ನು ದಿಬ್ರುಗಢ ಜೈಲಿನಲ್ಲಿ ಇರಿಸಲಾಗಿದೆ.
ಕಳೆದ ವರ್ಷ ಫೆಬ್ರವರಿ 23ರಂದು ಅಮೃತಪಾಲ್ ಸಿಂಗ್ ಮತ್ತು ಸಹಚರರು, ಅವರ ಸಹಾಯಕರಲ್ಲಿ ಒಬ್ಬನನ್ನು ಬಂಧನದಿಂದ ಮುಕ್ತಗೊಳಿಸಲು ಬ್ಯಾರಿಕೇಡ್‌ಗಳನ್ನು ಮುರಿದು ಕತ್ತಿಗಳು ಮತ್ತು ಬಂದೂಕುಗಳನ್ನು ಝಳಪಿಸುತ್ತಾ ಅಜ್ನಾಲಾ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸ್ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದರು. ಇದರ ನಂತರ ಅವರನ್ನು ಬಂಧಿಸಲಾಯಿತು.
ಅಮೃತಪಾಲ್ ಪಂಜಾಬ್‌ನಲ್ಲಿ ಡ್ರಗ್ ವಿರೋಧಿ ಅಭಿಯಾನವನ್ನು ನಡೆಸುವ ಮೂಲಕ ಬೆಳಕಿಗೆ ಬಂದರು. ಅಷ್ಟೇ ಅಲ್ಲ ಅಮೃತಪಾಲ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಡ್ರಗ್ ಡಿಅಡಿಕ್ಷನ್ ಸೆಂಟರ್ ನಡೆಸುತ್ತಿದ್ದರು. ಆದರೆ ವಿಪರ್ಯಾಸ ಎಂಬತೆ ಆತನ ಸಹೋದರನನ್ನು ಈಗ ಡ್ರಗ್ಸ್‌ನೊಂದಿಗೆ ಬಂಧಿಸಲಾಗಿದೆ. (ಏಜೆನ್ಸೀಸ್)