ನ್ಯೂಸ್

ಭಾರತದ ನೆರವಿಗೆ ಬರಲಿದೆ ಅಮೆರಿಕ ಸೇನೆ; ಚೀನಾ ಸವಾಲು ಎದುರಿಸಲು ನಿಯೋಜನೆ

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾವನ್ನು ಏಕಾಗಿಯಾಗಿಸಲು ಅಮೆರಿಕ ಪಣ ತೊಟ್ಟಿದೆ. ಭಾರತಕ್ಕೆ ಎದುರಾಗಿರುವ ಚೀನಾ ಸಂಘರ್ಷದ ಭೀತಿಯನ್ನು ಎದುರಿಸಲು ಕೈ ಜೋಡಿಸುತ್ತಿದೆ. ಇದೇ ಕಾರಣಕ್ಕಾಗಿ ಯುರೋಪ್​ ರಾಷ್ಟ್ರಗಳಲ್ಲಿ ನಿಯೋಜಿಸಲಾಗಿದ್ದ ಸೇನೆಯನ್ನು ಚೀನಾ ವಿರುದ್ಧ ಕಾರ್ಯಾಚರಣೆಗೆ ಸಜ್ಜುಗೊಳಿಸಿದೆ.

ಭಾರತ ಹಾಗೂ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಎದುರಾಗಿರುವ ಚೀನಾ ಸಂಘರ್ಷದ ಭೀತಿಯೇ ಸೇನಾ ತುಕಡಿಗಳ ಸ್ಥಳಾಂತರಕ್ಕೆ ಮುಖ್ಯ ಕಾರಣ. ಜರ್ಮನಿಯಿಂದ ಸೇನೆಯನ್ನು ಹಿಂಪಡೆದಿರುವುದು ಅತ್ಯಂತ ಯೋಜನಾ ಬದ್ಧ ಕ್ರಮವಾಗಿದೆ. ಅವನ್ನು ಬೇರೆಡೆ ನಿಯೋಜಿಸಲಾಗುತ್ತಿದೆ ಎಂದು ಅಮೆರಿಕ ಗೃಹ ಕಾರ್ಯದರ್ಶಿ ಮೈಕ್​ ಪಾಂಪಿಯೋ ಹೇಳಿದ್ದಾರೆ.

ಚೀನಾದ ಕಮ್ಯುನಿಸ್ಟ್​ ಪಕ್ಷದ ಕ್ರಮಗಳು ಭಾರತಕ್ಕೆ ಬೆದರಿಕೆ ಹಾಕುವಂಥದ್ದಾಗಿದೆ. ಜತೆಗೆ, ವಿಯೆಟ್ನಾಂ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಫೈನ್ಸ್​ ಹಾಗೂ ಚೀನಾದ ದಕ್ಷಿಣ ಏಷ್ಯಾ ಸಮುದ್ರ ಭಾಗದಲ್ಲಿ ಆತಂಕ ಮೂಡಿಸಿವೆ.

ಈ ಹಿನ್ನೆಲೆಯಲ್ಲಿ ಚೀನಿ ಸೇನೆಯನ್ನು ಹಿಮ್ಮೆಟ್ಟಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿನ ಎಲ್ಲ ಸವಾಲುಗಳನ್ನು ಎದುರಿಸಲು ಬೇಕಾದ ಸಂಪನ್ಮೂಲಗಳನ್ನು ಸಜ್ಜಾಗಿರಿಸಿಕೊಳ್ಳಲಾಗುತ್ತಿದೆ ಎಂದು ಪಾಂಪಿಯೋ ಹೇಳಿದ್ದಾರೆ.

ಜತೆಗೆ, ಭಾರತ- ಚೀನಾ ನಡುವಿನ ವಾಸ್ತವ ಗಡಿ ರೇಖೆಯಲ್ಲಿ ಚೀನಾ ಸೇನಾ ನಡೆಸುತ್ತಿರುವ ಎಲ್ಲ ಚಟುವಟಿಕೆಗಳ ಮೇಲೆ ಅಮೆರಿಕ ಸೇನೆ ನಿಗಾ ವಹಿಸಿದೆ ಎಂದು ಮೂಲಗಳು ತಿಳಿಸಿವೆ.